ಹರ್ಷನ ಕೀರ್ತಿಗೆ ವರ್ಷಳ ಸ್ಪೂರ್ತಿ
(ಆದರ್ಶ ದಂಪತಿಗಳ ಕಥೆ)
ಲೇಖಕ - ವಾಮನಾಚಾರ್ಯ)
ರಾಘವ್ ಪೂರ್ ನಗರದಲ್ಲಿ ಸೋಮ ವಾರ ಬೆಳಗಿನ ಒಂಭತ್ತು ಗಂಟೆ ಸಮಯ. ಅಂದು ಹವಾಮಾನ ಆಹ್ಲಾದಕರ ವಾಗಿತ್ತು. ಹರ್ಷ ಹಾಗು ವರ್ಷ ದಂಪತಿ ಮದುವೆ ಆದ ಆರು ತಿಂಗಳಾದ ಮೇಲೆ ಆಂಜನೇಯ ಬಡಾವಣೆಯ ತಮ್ಮ ನೂತನ ‘ಗೃಹ ಲಕ್ಷ್ಮಿ’ ಮನೆಯಲ್ಲಿ ವಾಸ. ಆಗಲೇ ತರಕಾರಿ ಮಾರುವ ಭದ್ರಪ್ಪ, ಹಾಲು ಮಾರುವ ನಿಂಗಮ್ಮ ಹಾಗು ದಿನಪತ್ರಿಕೆ ವಿತರಿಸುವ ಕೇಶವ್ ಬಂದು ಹೋಗಿದ್ದರು.
ಟ್ರಿನ್ ಟ್ರಿನ್ ಎಂದು ಕಾಲಿಂಗ್ ಬೆಲ್ ಶಬ್ದ.
“ಯಾರಪ್ಪ ಬೆಲ್ ಮಾಡುವರು?” ಎಂದು ವರ್ಷ ತನ್ನ ಪತಿಗೆ ಕೇಳಿದಳು.
“ಸ್ವಲ್ಪ ಇರು,” ಎಂದು ಹೇಳಿ ಬಾಗಿಲು ತೆಗೆದ.
ಅವರ ಮನೆಗೆ ಆಕಸ್ಮಿಕವಾಗಿ ರಾಘವಪುರ್ ನಗರದ ಪ್ರತಿಷ್ಟಿತ ವ್ಯಕ್ತಿ ಮಾಜಿ ಶಾಸಕ ಶಂಭು ನಾಥ್ ಕಲ್ಕಾಪುರ ಅವರ ಆಗಮನ. ಅವರು ಮನೆ ಒಳಗೆ ಬರದೇ,
“ಹರ್ಷ ವಕೀಲರೇ, ಕೋರ್ಟ್ ನಲ್ಲಿ ಇಂದಿನ ಕೇಸ್ ಕೈಬಿಡಿ. ಇಲ್ಲದಿದ್ದರೆ ಅಪಾಯ ಎದುರಿಸಿ,”ಎಂದು ಹೊರಗಿನಿಂದಲೇ ಧಮಕಿ ಹಾಕಿ ಹೋದರು.
ಇದನ್ನು ಕೇಳಿದ ವರ್ಷಗೆ ಕೋಪ ಬಂದು,
"ಇದೇನ್ರೀ, ಅವರಿಗೆ ಹೊತ್ತು ಗೊತ್ತು ಎನ್ನುವ ಪರಿಜ್ಞಾನ ಇಲ್ಲವೇ? ಇನ್ನೂ ಅರ್ಧ ಗಂಟೆಯಲ್ಲಿ ರೆಡಿ ಆಗಿ ಇಬ್ಬರೂ ಕೋರ್ಟ್ ಗೆ ಹೋಗ ಬೇಕು. ನಿಮ್ಮ ಸಹಾಯಕಿ ಆದ ನಾನು ನಿಮಗೆ ಸಂಭಂದ ಪಟ್ಟ ಫೈಲ್ ಕೊಡುವದಲ್ಲದೇ ಬ್ರಿಫಿ0ಗ್ ಮಾಡಬೇಕು. ಇಂದು ಕಲ್ಕಾಪುರ ಅವರದೇ ಮಹತ್ವ ವಾದ ಕೇಸ್ ಫೈನಲ್ ಹಿಯರಿಂಗ್ ಇದೆ. ನಿಮ್ಮ ಮುಖ ನೋಡಿ ಪಾಪ ಅನಿಸಿ ನನಗೆ ಆಗಿರುವ ಸಿಟ್ಟು ತಡೆದುಕೊಂಡೆ.”
“ವರ್ಷ, ಬೆದರಿಕೆಗೆ ನಾನು ಹೆದರುವವನು ಅಲ್ಲ. ಈಗ ರಾಘವಪುರ್ ನಲ್ಲಿ ನಾನು ಲೀಡಿಂಗ್ ಅಡ್ವೋಕೇಟ್. ಈ ಮಹಾಶಯ ಮೊದಲು ಎಷ್ಟೇ ಕಿರುಕಳ ಕೊಟ್ಟರೂ ನೀನು ನನಗೆ ಧೈರ್ಯ ಹೇಳಿ ಎಲ್ಲ ಕೆಲಸಗಳನ್ನು ಸುಗಮ ವಾಗಿ ಮಾಡಿದೆ. ನಿನ್ನ ಸಂಪೂರ್ಣ ಸಹಕಾರ ನನ್ನ ಯಶಸ್ಸಿಗೆ ನಾಂದಿ ಆಯಿತು.”
“ನೀವು ಕೇವಲ ಐದು ವರ್ಷ ಅವಧಿಯಲ್ಲಿ ರಾಘವ್ ಪೂರ್ ನಗರದ ಲೀಡಿಂಗ್ ಅಡ್ವೋಕೇಟ್ ಆಗಿರುವದಕ್ಕೆ ಕೇವಲ ನನ್ನದೇ ಪರಿಶ್ರಮ ಎಂದು ಬಡಾಯಿ ಕೊಚ್ಚಿ ಕೊಳ್ಳು ವದಿಲ್ಲ. ನಿಮ್ಮಲ್ಲಿ ಇರುವ ಬುದ್ಧಿವಂತಿಕೆ, ನಿಮಗಿರುವ ದೇವರಲ್ಲಿ ನಂಬಿಕೆ ಹಾಗೂ ಗುರಿ ಮುಟ್ಟುವ ಛಲ ಎಲ್ಲವೂ ಯಶಸ್ಸಿಗೆ ಕಾರಣವಾಯಿತು.”
“ವರ್ಷ, ಇದು ನಿನ್ನ ಒಳ್ಳೆಯ ಗುಣ. ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ಶಂಭು ನಾಥ ಕೇಸ್ ಗೆದ್ದರೆ ನಮ್ಮ ಒಳ್ಳೆಯ ದಿವಸಗಳು ಪ್ರಾರಂಭ ವಾಗುವವು. ಆದರೆ ಒಂದು ಮಾತು ಸತ್ಯ.”
“ಅದಾ ವುದು ಬೇಗ ಹೇಳಿ?”
“ನನಗೆ ಸಿಕ್ಕಿರುವ ಕೀರ್ತಿ ಹಿಂದೆ ನಿನ್ನ ಸ್ಫೂರ್ತಿ ಇದೆ ಎನ್ನುವುದನ್ನು ನೀನು ಸಿದ್ಧ ಮಾಡಿ ತೋರಿಸಿದೆ. ನಿನ್ನ ಸ್ಪೂರ್ತಿ ಜೊತೆಗೆ ಪರಿಶ್ರಮ ಇರುವದರಿಂದ ಇದು ಸಾಧ್ಯ ವಾಯಿತು.”
“ಬಹಳ ಹೊಗಳ ಬೇಡಿ. ನನಗೆ ಜಂಭ ಬಂದರೆ ಅನಾಹುತ ಆಗಬಹುದು. ಇದರಿಂದ ಮುಂದೆ ನಿನಗೆ ತೊಂದರೆ.”
“ನಿನಗೆ ಗೊತ್ತಿರುವಂತೆ ಶಂಭುನಾಥ್ ಕೇಸ್ ನ್ನು ನನ್ನ ಅಡ್ವೋಕೇಟ್ ಮಿತ್ರ ಗಿರೀಶ್ ಚಾಲೆಂಜ್ ಆಗಿ ಸ್ವೀಕರಿಸಿದ್ದಾನೆ. ನನ್ನ ಮೇಲೆ ಇರುವ ಸೇಡು ತೀರಿಸಲು ಅವನು ಈ ಕೇಸ್ ಗೆಲ್ಲುವ ಪಣ ತೊಟ್ಟಿದ್ದಾನೆ. ಇದರ ಕಾರಣ ನಿನಗೆ ಗೊತ್ತು. ಮೊದಲು ನಿನ್ನ ಮದುವೆ ಗಿರೀಶ್ ಜೊತೆಗೆ ಮಾಡುವ ನಿಶ್ಚಿತಾರ್ಥದ ದಿನಾಂಕ ಕೂಡ ನಿರ್ಧಾರವಾಗಿತ್ತು. ಆದರೆ ನನ್ನ ಸುದೈವಕ್ಕೆ ನೀನು ನನ್ನ ಬಾಳ ಸಂಗಾತಿ ಆದೆ.”
“ಹೌದು, ನಿಶ್ಚಿತಾರ್ಥದ ಒಂದು ವಾರದ ಮೊದಲು ನಿನ್ನ ಭೇಟಿ ವಿಶೇಷ ಸಂದರ್ಭದಲ್ಲಿ ಆಯಿತು. ಆಗ ನೀನು ಮನ್ಮಥ ನಂತೆ ಕಂಡೆ. ಅವನು ಅಷ್ಟಾವಕ್ರ ನ ಹಾಗೆ ಕಂಡ. ಇಬ್ಬರೂ ವೃತ್ತಿಯಿಂದ ಅಡ್ವೋಕೇಟ್, ವಿದ್ಯಾಭ್ಯಾಸದಲ್ಲಿ ಪ್ರತಿಭಾವಂತರು, ಸ್ವಭಾವದಲ್ಲಿ ಶಾಂತರು. ಆದರೆ ನಿನ್ನಲ್ಲಿ ಇರುವ ಅದ್ಭುತ ಕಂಠ, ಗಾಂಭೀರ್ಯ ಅವನಲ್ಲಿ ಇಲ್ಲ. ನನ್ನ ಇಂಗಿತ ನಿನಗೆ ಹೇಳಿದಾಗ ನೀನು ತಕ್ಷಣ ಒಪ್ಪಿಗೆ ಕೊಟ್ಟೆ. ಮಿಯಾ, ಬೀಬಿ ರಾಜಿ ಹೂತೋ ಕ್ಯಾ ಕರೆಗಾ ಖಾಜಿ.”
ಇಬ್ಬರೂ ಜೋರಾಗಿ ಬಿದ್ದು ಬಿದ್ದು ನಕ್ಕರು.
ಅವಸರದಲ್ಲಿ ಊಟ ಮುಗಿಸಿ ದ್ವಿಚಕ್ರ ವಾಹನದ ಮೇಲೆ ಕೋರ್ಟ್ ಕಡೆಗೆ ನಡೆದರು. ದಾರಿಯಲ್ಲಿ ಶಂಭು ನಾಥ ನ ಚೇಲಾಗಳು ಅವರನ್ನು ತಡೆ ದರು. ಅದರಲ್ಲಿ ಒಬ್ಬ,
“ಏ ಹರ್ಷ, ಸುಮ್ಮನೆ ಮನೆಗೆ ವಾಪಸ್ ಹೋಗು,” ಎಂದ.
ಇನ್ನೊಬ್ಬ ಬಂದು,
“ನೀನು ನೆಮ್ಮದಿಯಿಂದ ಇರಬೇಕಾದರೆ ನಮ್ಮ ಯಜಮಾನ ಹೇಳಿದ ಮಾತು ಕೇಳು,”ಎಂದ.
ಪರಿಸ್ಥಿತಿ ಅರಿತ ವರ್ಷಆಗಲೇ ಮೊಬೈಲ್ ಮೂಲಕ ಪೊಲೀಸ್ ರಿಗೆ ತಿಳಿಸಿದಳು. ಇಬ್ಬರೂ ಪೇದೆಗಳು ಬಂದರು. ಇವರನ್ನು ನೋಡಿ ಶಂಭು ನಾಥ ಚೇಲಾಗಳು ಓಡಿ ಹೋದರು.
ಕೋರ್ಟ್ ನಲ್ಲಿ ಹರ್ಷ ಮಂಡಿಸಿದ ವಾದ ಹಾಗು ಗಿರೀಶ್ ಅದಕ್ಕೆ ಪ್ರತಿವಾದ ಸುಮಾರು ಒಂದು ಗಂಟೆ ನಡೆಯಿತು. ನ್ಯಾಯಾಧೀಶರು ಶಾಂತ ಚಿತ್ತ ದಿಂದ ಆಲಿಸಿ ತೀರ್ಪು ಕಾದಿರಿಸಿ ಒಂದು ವಾರ ಬಿಟ್ಟು ದಿನಾಂಕ ಕೊಟ್ಟರು. ಕೋರ್ಟ್ ಹಾಲ್ ನಿಂದ ಹೊರಗೆ ಬಂದಾಗ ಇಬ್ಬರೂ ಯುವ ವಕೀಲರು ಮುಖಾ ಮುಖಿ ಭೇಟಿ ಆಗಿ ಸಿಟ್ಟಿ ನಿಂದ ನೋಡಿ ಮುಂದೆ ಹೋದರು.
ಒಂದು ವಾರದ ನಂತರ ನ್ಯಾಯಾಧೀಶರು ಸುದೀರ್ಘವಾಗಿ ಪರಿಶೀಲನೆ ಮಾಡಿ ತೀರ್ಪು ಘೋಷಿಸಿದರು. ಹರ್ಷ ನಿಗೆ ಖುಷಿ ಆದರೆ ಗಿರೀಶ್ ನಿಗೆ ಅಸಮಾಧಾನ. ಶಂಭು ನಾಥ
ನಿಗೆ ಹತ್ತು ಜನ ಬಡ ರೈತರ ಹತ್ತು ಎಕರೆ ಭೂಮಿ ಹಿಂತಿರುಗಿ ಸುವದಲ್ಲದೆ ಒಂದು ವರ್ಷ ಸೆರೆಮನೆ ವಾಸ ಅಲ್ಲದೆ ಹತ್ತು ಲಕ್ಷ ದಂಡ ತಲಾ ಒಂದು ಲಕ್ಷ ರೂಪಾಯಿ ಕೊಡಬೇಕು. ಇದಾದಮೇಲೆ ಹರ್ಷನಿಗೆ ಶುಕ್ರದೆಸೆ ಪ್ರಾರಂಭ ವಾಯಿತು. ರಾಘವ ಪುರ ನಗರದಲ್ಲಿ ಬಿಡುವಿಲ್ಲದ ವಕೀಲನಾದ.
ಈ ಮಧ್ಯ ಗಿರೀಶ್ ನಿಗೂ ಒಳ್ಳೆಯ ಅದೃಷ್ಟ ಒದಗಿ ಬಂದಿತು. ಶಂಭು ನಾಥ ಕಲ್ಕಾಪುರ ಅವರ ದೂರ ಸಂಭಧಿ ಆದ ಗಿರೀಶ್ ನಿಗೆ ಅವರ ಜೊತೆಗೆ ಒಡನಾಟ ಬೆಳೆಯಿತು. ಶಂಭು ನಾಥ ಅವರಿಗೆ ಮಕ್ಕಳು ಇರಲಿಲ್ಲ. ಗಿರೀಶ್ ಅವರ ದತ್ತು ಮಗನಾದ. ಮುಂದೆ ಗಿರೀಶ್ ರಾಜಕೀಯದಲ್ಲಿ ಪ್ರವೇಶ ಮಾಡಿ ಶಂಭು ನಾಥ ಅವರಿಗೆ ಎಲ್ಲ ರೀತಿಯ ಸಹಾಯ ಮಾಡಿದ. ಮುಂದೆ ಗಿರೀಶ್ ಅವರ ಉತ್ತರಾಧಿಕಾರಿ ಆದ. ಗಿರೀಶ್ ರಾಜಕೀಯ ಪ್ರವೇಶ ಮಾಡಿದಮೇಲೆ ಅನೇಕ ಪಾಪ ಕೃತ್ಯಗಳನ್ನು ಮಾಡಿ ಜೈಲು ಸೇರಿದ.
xxxxx
ಒಂದು ದಿವಸ ಭಾನುವಾರ ಮನೆಯಲ್ಲಿ ಹರ್ಷ ಒಬ್ಬನೇ ಇದ್ದ. ಆಗ ಸಮಯ ಸಾಯಂಕಾಲ ಆರು ಗಂಟೆ. ಸುಮಾರು ಎಂಟು ವರ್ಷಗಳು ಹಿಂದಿನ ಘಟನೆ ಗಳು ನೆನಪು ಬಂದವು.
ಬೆಂಗಳೂರು ಲಾ ಕಾಲೇಜ್ ನಲ್ಲಿ ಹರ್ಷ ಕಾನೂನು ಪದವಿ ಮುಗಿಸಿದಮೇಲೆ ಬೆಂಗಳೂರು ನಲ್ಲಿ ಒಂದು ವರ್ಷ ಸೀನಿಯರ್ ಅಡ್ವೋಕೆಟ್ ವೆಂಕಟೇಶ್ ಮೂರ್ತಿ ಅವರ ಹತ್ತಿರ ಕೆಲಸ ಮುಗಿಸಿ ರಾಘವಪುರ್ ನಗರದಲ್ಲಿ ಪ್ರಾಕ್ಟೀಸ್ ಪ್ರಾರಂಭ ಮಾಡಿದ.
ಹರ್ಷ, ರಾಘವಪುರ್ ನಗರ ಏಕೆ ಆಯ್ಕೆ ಮಾಡಿದ?
ನಗರಕ್ಕೂ ಹರ್ಷ ನಿಗೂ ಅವಿನಾಭಾವ ಸಂಭಂದ?”
ರಾಘವಪುರ್ ಹರ್ಷನ ತಾಯಿ ಹುಟ್ಟಿ ಬೆಳೆದ ಊರು. ಕೇವಲ ಐದು ವರ್ಷದಲ್ಲಿ ಆತ ಲೀಡಿಂಗ್ ಲಾಯರ್ ಎನ್ನುವ ಹೆಗ್ಗಳಿಕೆಗೆ ಪಾತ್ರ ನಾಗಿರುವದು ಕೆಲವರಿಗೆ ಸಂತೋಷ ವಾದರೆ ಇನ್ನೂ ಕೆಲವರಿಗೆ ಹೊಟ್ಟೆಕಿಚ್ಚು. ನೆನಗುದಿಗೆ ಬಿದ್ದಿರುವ ಎಷ್ಟೋ ಹಳೆಯ ಕೇಸ್ ಗಳನ್ನು ಇತ್ಯರ್ಥ ಮಾಡುವಲ್ಲಿ ಹರ್ಷ ಯಶಸ್ವಿ ಆದ. ಆತನ ಜೊತೆಗೆ ಯಾವುದೇ ವಿಷಯದ ಮೇಲೆ ಚರ್ಚೆ ಮಾಡಿದರೆ ಅವರನ್ನು ಸೋಲಿಸುವದು ಕಷ್ಟ ಎಂದು ಅಲ್ಲಿಯ ಜನ ಹೇಳುತ್ತಿದ್ದರು.
ಹರ್ಷ ವಕೀಲಿ ವೃತ್ತಿ ಪ್ರಾರಂಭ ಮಾಡಿದ ಮೊದಲನೇ ವರ್ಷ. ಬೆಳಗಿನ ಹನ್ನೊಂದು ಗಂಟೆ ಸಮಯ. ಕೋರ್ಟ್ ಆವರಣದಲ್ಲಿ ಇರುವ ಕ್ಯಾಂಟೀನ್ ನಲ್ಲಿ ಹರ್ಷ ತನ್ನ ಇನ್ನೊಬ್ಬ ಲಾಯರ್ ಮಿತ್ರ ಜೊತೆಗೆ ಕಾಫಿ ಕುಡಿಯಲು ಬಂದ.
"ಗಿರೀಶ್,ಯಾಕೋ ನನಗೆ ಇಲ್ಲಿ ಇರುವ ಮನಸ್ಸು ಇಲ್ಲ. ಈ ಒಂದು ವರ್ಷದ ಅವಧಿಯಲ್ಲಿ ಒಂದು ಕೇಸು ಬಂದಿಲ್ಲ. ಮುಂದೆ ನನ್ನ ವಕೀಲ ವೃತ್ತಿ ಇಲ್ಲಿ ನಡೆಯುವದೋ ಅಥವಾ ಇಲ್ಲ. ಬೆಂಗಳೂರು ವಾಪಸ್ ಹೋಗಿ ಅಲ್ಲಿ ಒಂದು ಒಳ್ಳೇ ಕೆಲಸಕ್ಕೆ ಸೇರುವೆ," ಎಂದ.
“ಹರ್ಷ, ಇಷ್ಟು ಬೇಗ ನಿರಾಶೆ ಆದರೆ ಹೇಗೆ? ನೋಡು ನನ್ನ ಅವಸ್ಥೆ. ಎರಡು ವರ್ಷದ ಹಿಂದೆ ನಾನು ಲಾಯರ್. ಜನರು ನನಗೆ ಸಂಡೆ ಲಾಯರ್ ಅನ್ನುವರು. ಒಳ್ಳೇಯ ಸಮಯ ಬಂದೆ ಬರುತ್ತೆ. ಆಶಾವಾದಿ ಇರುವದು ಒಳ್ಳೆಯದಲ್ಲವೇ?”
ಎದುರಿನ ಸೀಟ್ ಮೇಲೆ ಕುಳಿತ ಸುಮಾರು ಇಪ್ಪತ್ತೈದು ವರ್ಷದ ಸುಂದರ ಯುವತಿ ಪಕ್ಕದಲ್ಲಿ ಕುಳಿತ ಮಧ್ಯ ವಯಸ್ಸಿನ ಮಹಿಳೆ ಇಬ್ಬರೂ ಕಾಫಿ ಕುಡಿಯುತ್ತ ಹಾಸ್ಯದ ಮಾತುಗಳು ಆಡುತ್ತಾ ಜೋರಾಗಿ ನಗುತ್ತಿದ್ದರು.
“ಗಿರೀಶ್, ಆ ಯುವತಿ ಯಾರು?” ಎಂದು ಕೇಳಿದ.
“ಆಕೆ ಶಾಲಿನಿ. ವಿದ್ಯಾವರ್ಧಕ ಪ್ರಾಢಶಾಲೆ ಯಲ್ಲಿ ಗಣಿತ ಶಿಕ್ಷಕಿ.”
“ಗಿರೀಶ್, ಶಾಲಿನಿ ಯ ಹಾಸ್ಯ ಭರಿತ ಮಾತುಗಳು ಹಾಗೂ ಅವಳ ರೂಪ, ಲಾವಣ್ಯ, ನಗುವಾಗ ಕಾಣುವ ಆಕೆಯ ಸುಂದರ ದಂತ ಪಂಕ್ತಿಗಳು ನೋಡಿ ನನಗೆ ಆಕೆ ಮೇಲೆ ಪ್ರೀತಿ ಅಂಕುರ ವಾಗಿದೆ. ಆಕೆ ಬಗ್ಗೆ ನಿನಗೆ ಮಾಹಿತಿ ಇದ್ದರೆ ಹೇಳು.”
ಗಿರೀಶ್ ನಿಗೆ ಕಸವಿಸಿ ಆಯಿತು. ಕಾರಣ ಬರುವ ತಿಂಗಳು ದಿನಾಂಕ ಐದಕ್ಕೆ ಅವನ ಜೊತೆಗೆ ಆಕೆ ಮದುವೆ ನಿಶ್ಚಿತಾರ್ಥ ಇದೆ. ಇದರ ಸಿದ್ಧತೆ ಭರದಿಂದ ಸಾಗಿದೆ. ಇದನ್ನು ಹೇಳ ಬೇಕೋ ಬೇಡವೋ ಎಂದು ವಿಚಾರಿಸಿದ.
“ಹರ್ಷ, ನನಗೆ ತಿಳಿದ ಮಾಹಿತಿ ಪ್ರಕಾರ ಆಕೆಯ ಮದುವೆ ನಿರ್ಧಾರ ವಾಗಿದೆ. ನೀನು ಬೇರೆ ಹುಡುಗಿಯನ್ನು ನೋಡು,” ಎಂದ.
ಒಂದು ತಿಂಗಳು ಕಳೆಯಿತು.
ಆದರೆ ಮುಂದೆ ಆಗಿರುವದೇ ಬೇರೆ.
ಶಾಲಿನಿ ಹಾಗೂ ಗಿರೀಶ್ ಮದುವೆ ನಿಶ್ಚಿತಾರ್ಥವಾಗುವ ಒಂದು ವಾರ ಮೊದಲು ಶಾಲಿನಿ ಈ ಮದುವೆ ಬೇಡ ಎಂದಳು. ಅದಕ್ಕೆ ಕಾರಣ ಒಂದು ವಿಶೇಷ ಸನ್ನಿವೇಶ.
ಒಂದು ದಿವಸ ಹರ್ಷ ನಿಗೆ ಸರಸ್ವತಿ ವಿದ್ಯಾ ವರ್ಧಕ ಪ್ರೌಢ ಶಾಲೆಯ ಹೆಡ್ ಮಾಸ್ಟರ್ ಮಧುಕರ್ ದಾಸ ಅವರ ಕರೆ ಬಂದಿತು. “ಹರ್ಷ, ಬರುವ ಭಾನುವಾರ ದಿನಾಂಕ ಹತ್ತು ನಮ್ಮ ಶಾಲೆಯ ವಾರ್ಷಿಕೋತ್ಸವ.
“ಹರ್ಷ, ನಿನಗೆ ಸುಮಧುರ ಕಂಠ ಇದ್ದು ಈಗಾಗಲೇ ಅನೇಕ ಕಡೆ ನಿನ್ನ ಗಾಯನ ಕಾರ್ಯಕ್ರಮ ಆಗಿರುವದು ನನಗೆ ಗೊತ್ತು. ನೀನು ನಮ್ಮ ಶಾಲೆಯ ವಾರ್ಷಿಕೋತ್ಸವದಲ್ಲಿ ಸಂಗೀತ ಕಾರ್ಯಕ್ರಮ ನಡೆಸ ಬೇಕು.”
ಹರ್ಷ ನಿಗೆ ಮಧುಕರ್ ದಾಸ್ ಅವರ ಬಗ್ಗೆ ತುಂಬಾ ಗೌರವ.
“ಆಗಲಿ ಸರ್,” ಎಂದ.
ಅಂದಿನ ಕಾರ್ಯಕ್ರಮದ ಹರ್ಷನ ಸುಶ್ರಾವ್ಯ ಶಾಸ್ತ್ರೀ ಸಂಗೀತ ಜೊತೆಗೆ ಹಳೆಯ ಚಲನಚಿತ್ರ ಗೀತೆಗಳನ್ನು ಆಲಿಸಿದ ಶಾಲಿನಿಗೆ ತುಂಬಾ ಮೆಚ್ಚುಗೆ ಆಗಿ ಆತನ ಪರಿಚಯ ಮಾಡಿಕೊಂಡಳು.
ಅವರಿಬ್ಬರೂ ಪ್ರೇಮಿಗಳಾದರು. ಆಗಲೇ ಗಿರೀಶ್ ಜೊತೆಗೆ ಮದುವೆ ಆಗಲು ನಿರ್ಧಾರ ಮಾಡಿದ ನಿಶ್ಚಿತಾರ್ಥ ಕ್ಯಾನ್ಸಲ್ ಮಾಡಿ ಅವನನ್ನು ತಿರಸ್ಕಾರ ಮಾಡಿದಳು. ಇದರಿಂದ ತುಂಬಾ ನೊಂದು ಕೊಂಡ ಗಿರೀಶ್, ಮಿತ್ರ ನಾದ ಹರ್ಷ ನ ವೈರಿ ಆದ. ಮದುವೆ ಆದಮೇಲೆ ಪತ್ನಿ ಶಾಲಿನಿ ಹೆಸರು ವರ್ಷಾಎಂದು ಬದಲಾಯಿಸಿದ. ಮುಂದೆ ಒಂದು ವರ್ಷ ಆದ ಮೇಲೆ ಶಾಲಿನಿ, ಶಿಕ್ಷಕ ಕೆಲಸಕ್ಕೆ ರಾಜೀನಾಮೆ ಕೊಟ್ಟು ಪತಿಗೆ ಆತನ ವಕೀಲಿ ವೃತ್ತಿಯಲ್ಲಿ ಸಹಾಯಕ ಳಾದಳು. ಆಕೆ ಹರ್ಷ ನ ಕೀರ್ತಿಗೆ ಸ್ಪೂರ್ತಿ ಆದಳು. ಅಲ್ಲದೆ ಅವರಿಗೆ ಆದರ್ಶ ದಂಪತಿಗಳು ಎಂದು ಜನರು ಕರೆದರು.
ಹೊರಗಡೆಯಿಂದ ಬಾಗಿಲು ಬಡಿಯುವ ಶಬ್ದ ಹಾಗೂ ಅಡುಗೆ ಮನೆಯಲ್ಲಿ ಬೆಕ್ಕಿನ ಕಿತಾಪತಿಯ ಜೋರಾದ ಶಬ್ದ. ಇದರಿಂದ ಹರ್ಷ ಹಿಂದಿನ ನೆನಪುಗಳಿಂದ ಹೊರಬಂದ. ಆದರೆ ಬಾಗಿಲು ಮೊದಲು ತೆಗೆಯಬೇಕೋ ಇಲ್ಲವೇ ಅಡುಗೆ ಮನೆಗೆ ಹೋಗಬೇಕು ಎನ್ನುವದು ಅವನಿಗೆ ಕಾಡಿತು. ಈಗ ಬಾಗಿಲು ಬಡಿಯುವವರು ಶ್ರೀಮತಿ ವರ್ಷ ಎಂದು ಗೊತ್ತಾಗಿ ಮೊದಲು ಬಾಗಿಲು ತೆಗೆದ.