ಉದ್ವೇಗದಲ್ಲೂ ಹಾಸ್ಯ
(ಚಿಕ್ಕ ಹಾಸ್ಯ ಕಥೆ)
ಲೇಖಕ ವಾಮನ್ ಆಚಾರ್ಯ
ಗಿಡ ಮರಗಳು ಬೆಟ್ಟ ಗಳ ಮಧ್ಯ ನಿಸರ್ಗದ ಮಡಿಲಲ್ಲಿ ಇರುವ ಹತ್ತು ಸಾವಿರ ಜನ ಸಂಖ್ಯೆ ಇರುವ ಪುಟ್ಟ ಊರು ಚಂದನ ಗಿರಿ. ಇಲ್ಲಿಯ ಪ್ರಗತಿ ಸುವರ್ಣ ಬ್ಯಾಂಕ್, ಶಾಖಾ ವ್ಯವಸ್ಥಾಪಕ, ರತ್ನಾಕರ್ ಎಂದಿನಂತೆ ಸೋಮವಾರ ಬೆಳಗ್ಗೆ ಬಸ್ ಮೂಲಕ ಹದಿನೈದು ಕಿಲೋಮೀಯರ್ ದೂರ ಇರುವ ರಾಘವ್ ಪೂರ್ ಟೌನ್ ನಿಂದ ಆಗಮಿಸಿದ. ಅಂದು ದಾರಿಯಲ್ಲಿ ಬಸ್ ಕೆಟ್ಟು ಚಂದನ ಗಿರಿ ಮುಟ್ಟುವದಕ್ಕೆ ಮಧ್ಯಾನ್ಹ ಹನ್ನೆರಡು ಗಂಟೆ. ಬ್ಯಾಂಕಿನ ವ್ಯವಹಾರದ ಸಮಯ 10 ಗಂಟೆ. ಬೇಸಿಗೆ ಬಿಸಿಲು ಪ್ರಖರ ವಾಗಿತ್ತು. ಬಸ್ ನಿಲ್ದಾಣ ಬಿಕೋ ಎನ್ನುವ ಹಾಗೆ ಇತ್ತು.
ಅಲ್ಲಿಂದ ಬ್ಯಾಂಕ್ ಶಾಖೆ ಎರಡು ಕಿಲೋ ಮೀಟರ್ ದೂರ. ದಿನಾಲು ರತ್ನಾಕರ್ ಆಟೋ ದಲ್ಲಿ ಹೋಗುವರು. ಅಂದು ಊರಲ್ಲಿ ಇರುವ ಎರಡೂ ಆಟೋ ಇಲ್ಲ. ಆಗಲೇ ಎರಡು ಗಂಟೆ ವಿಳಂಬ. ಬ್ಯಾಂಕ್ ಹೋಗಲು ಏನೂ ಸೌಕರ್ಯ ಇಲ್ಲ. ಬ್ಯಾಂಕ್ ನಲ್ಲಿ ರತ್ನಾಕರ ಒಬ್ಬನೇ ಅಧಿಕಾರಿ ಹಾಗೂ ಕಿಶೋರ್ ಎನ್ನುವ ಕ್ಯಾಶಿಯರ್.
ಅನ್ಯ ಮಾರ್ಗ ಇಲ್ಲದೇ ಪ್ರಖರವಾದ ಬಿಸಿಲಿನಲ್ಲಿ ರತ್ನಾಕರ್ ನಡೆದುಕೊಂಡು ಶಾಖೆ ಕಡೆ ಹೊರಟ. ಸ್ವಲ್ಪ ಮುಂದೆ ಹೋದಮೇಲೆ ಮರದ ಕೆಳಗೆ ಒಂದು ಕಾರ್ ಪಾರ್ಕ್ ಮಾಡಿದ್ದರು. ಸಮೀಪ ಹೋದ ಮೇಲೆ ಗೊತ್ತಾಯಿತು ಅದು ‘ಜನ ಕಲ್ಯಾಣ’ ರಾಜಕೀಯ ಪಕ್ಷದ ವಾಹನ. ಆ ಸಮಯ ಚುನಾವಣೆ ಪ್ರಚಾರಕ್ಕೆ ಹೊರಟಿದ್ದ ವಾಹನ. ಅದರಲ್ಲಿ ಇರುವವರು ಮೂರು ಜನ. ಅದಕ್ಕೆ ದೊಡ್ಡದಾದ ಬ್ಯಾನರ್ ಕಟ್ಟಿದ್ದರು. ಅದು ಬ್ಯಾಂಕ್ ಶಾಖೆ ಕಡೆ ಹೋಗುವದಾಗಿ ತಿಳಿಯಿತು.
ಆಗ ರತ್ನಾಕರ್,
“ಸ್ವಾಮಿ, ನನಗೆ ಪ್ರಗತಿ ಸುವರ್ಣ ಬ್ಯಾಂಕ್ ವರೆಗೆ ಲಿಫ್ಟ್ ಕೊಡುತ್ತೀರಾ?” ಎಂದು ಕೇಳಿದ.
ವಾಹನ ಚಾಲಕ, “ಬೇಗ ಬನ್ನಿ,”ಎಂದ.
ಇನ್ನೇನು ರತ್ನಾಕರ್ ವಾಹನ ದಲ್ಲಿ ಕೂಡಬೇಕು ಎನ್ನುವಾಗ ಯಾರೋ ಆತನ ಬೆನ್ನು ತಟ್ಟಿದ್ದರು. ಯಾರು ಎಂದು ಹಿಂದೆ ತಿರುಗಿ ನೋಡಿದಾಗ ಅವರು ಮುಕುಂದರಾವ್, ನಿವೃತ್ತ ಶಿಕ್ಷಕರು ಹಾಗೂ ಬ್ಯಾಂಕ್ ಗ್ರಾಹಕರು.
“ಮ್ಯಾನೇಜರ್ ಸಾಹೇಬರೇ, ಈ ವಾಹನದಲ್ಲಿ ನೀವು ಕುಳಿತರೆ ನಿಮಗೆ ತೊಂದರೆ. ಬ್ಯಾಂಕ್ ಉದ್ಯೋಗಿ ಆಗಿ ರಾಜಕೀಯ ಪಕ್ಷದ ವಾಹನದಲ್ಲಿ ಹೋದರೆ ನಿಮ್ಮ ಕೆಲಸಕ್ಕೆ ನಿಶ್ಚಿತವಾಗಿ ಸಂಚಕಾರ ಬರುವದು,”ಎಂದರು ನಗುತ್ತ.
ರತ್ನಾಕರ್ ಒಂದು ಕ್ಷಣ ಯೋಚನೆ ಮಾಡಿ,
“ಸರ್, ಬ್ಯಾಂಕ್ ಗೆ ಹೋಗುವದು ಈಗಾಗಲೇ ಬಹಳ ತಡವಾಗಿದೆ. ನೀವು ಹಿರಿಯರು ಹೀಗೆಲ್ಲ ಹೇಳಿದರೆ ಹೇಗೆ?”
ರತ್ನಾಕರ್ ಗೆ ಉದ್ವೇಗ ಹೆಚ್ಚಾಗಿ ಚಡಪಡಿಸ ತೊಡಗಿದ. ಇವರ ಸಂಭಾಷಣೆ ಗಮನಿಸದ ಕಾರ್ ಚಾಲಕ,
“ಸ್ವಾಮಿ, ಬರುವ ಹಾಗಿದ್ದರೆ ಬನ್ನಿ. ನಾನು ಬೇಗನೆ ಹೊರಡಬೇಕು,” ಎಂದ.
ಮುಕುಂದ್ ರಾವ್ ಅವರು ನಗುತ್ತ,
“ಹೋಗಿ ಮ್ಯಾನೇಜರ್ ಸಾಹೇಬರೇ ನಿಮಗೆ ತಮಾಷೆ ಮಾಡಿದೆ,” ಎಂದರು.
ದಾರಿಯಲ್ಲಿ ಕಾರ್ ಚಾಲಕ,
“ಸಾರ್, ಹಿರಿಯ ಮನುಷ್ಯ ಹೇಳಿದ್ದು ನನಗೆ ಸರಿ ಅನಿಸುತ್ತದೆ. ನಮ್ಮ ಕಾರ್ ನಲ್ಲಿ ಆಟೋಮ್ಯಾಟಿಕ್ ಕ್ಯಾಮರಾ ಅಳವಡಿಸ ಲಾಗಿದೆ. ನಾವೆಲ್ಲ ಪಕ್ಷದ ಕಾರ್ಯ ಕರ್ತರು. ನಮ್ಮ ಗ್ರೂಪ್ ನ ಫೋಟೋದಲ್ಲಿ ನೀವು ಬಂದರೆ ಸಹಜವಾಗಿ ನಮ್ಮ ಪಕ್ಷದ ಕಾರ್ಯಕರ್ತ ಆಗುವದಿಲ್ಲವೇ? ನಿಮಗೆ ತೊಂದರೆ ಆದರೆ ನನಗೆ ಬಯ್ಯ ಬೇಡಿ,” ಎಂದ ನಗುತ್ತಾ.
“ಏನಾದರೂ ಆಗಲಿ. ದಯಮಾಡಿ ಮೊದಲು ನನಗೆ ಬ್ಯಾಂಕ್ ಮುಟ್ಟಿಸಿ,” ದೇವರ ಧ್ಯಾನ ಮಾಡುತ್ತಾ ಹೇಳಿದ ರತ್ನಾಕರ.
ಮುಂದೆ ಐದು ನಿಮಿಷದಲ್ಲಿ ರತ್ನಾಕರ್ ಬ್ಯಾಂಕ್ ಶಾಖೆಗೆ ಬರುತ್ತಲೇ ಅಲ್ಲಿ ಒಂದು ಆಶ್ಚರ್ಯ. ನಾಲ್ಕೈದು ಗ್ರಾಹಕರು ಬ್ಯಾಂಕ್ ಮುಖ್ಯ ದ್ವಾರದ ಹತ್ತಿರ ಒಬ್ಬ ವಾಲ್ ಕ್ಲಾಕ್ ಹಿಡಿದು ಕೊಂಡು ಸೀರಿಯಸ್ ಆಗಿ ನಿಂತರೆ, ಇನ್ನೊಬ್ಬ ಕೈಯಲ್ಲಿ ಪಾಸಬುಕ್,ಮುಗದೊಬ್ಬಾ ನೋಟಿನ ಬಂಡಲ್ ತೋರಿಸಿದ. ಅವರು ಹೀಗೆ ಮಾಡುವ ಉದ್ದೇಶ ಮ್ಯಾನೇಜರ್ ಸಾಹೇಬರು ಬ್ಯಾಂಕ್ ಗೆ ಬರುವ ಸಮಯ ಹಾಗೂ ತಾವೆಲ್ಲರೂ ಬ್ಯಾಂಕ್ ಬರುವ ಉದ್ದೇಶ ಆಗಿತ್ತು.
ರತ್ನಾಕರ್ ನಿಗೆ ಉದ್ವೇಗ ಅತಿಯಾಗಿ ಅವರಿಗೆ ಕೈ ಜೋಡಿಸಿ ತಡ ಆಗಿರುವ ದಕ್ಕೆ ಕ್ಷಮೆ ಕೇಳಿದ. ಅದೇ ಕ್ಷಣ ಎಲ್ಲರೂ ಜೋರಾಗಿ ನಗುತ್ತ ಮ್ಯಾನೇಜರ್ ಅವರನ್ನು ಒಳಗೆ ಕರೆದುಕೊಂಡು ಹೋದರು. ಗ್ರಾಹಕರ ನಟನೆ ಮುಗಿದ ಮೇಲೆ ಕ್ಯಾಶಿಯರ್ ಕಿಶೋರ್ ನ ಸರದಿ. ಆತ ಗಂಭೀರವಾಗಿ ಗೋಡೆ ಕಡೆ ನೋಡುತ್ತ ಕುಳಿತಿದ್ದ.
ರತ್ನಾಕರ್ ನಿಗೆ ಅರ್ಥವಾಗಿ,
“ಏನ್ರಿ ಕಿಶೋರ್ ಅವರೇ, ನಿಮ್ಮದೇನು ದೂರು? ನಿಮಗೂ ನನ್ನ ಮೇಲೆ ಕೋಪನಾ?”
“ಸರ್, ನನಗೆ ಕೋಪಾನೂ ಇಲ್ಲ, ತಾಪಾನೂ ಇಲ್ಲ. ನೀವು ತಡವಾಗಿ ಬರುವ ಕಾರಣ ಗೊತ್ತು. ನಿಮ್ಮ ಉದ್ವೇಗ ಕಡಿಮೆ ಮಾಡಲು ಇಷ್ಟೆಲ್ಲಾ ನಾಟಕ ಮಾಡಬೇಕಾಯಿತು,” ಎಂದ.
ಒಬ್ಬ ಗ್ರಾಹಕ ಬಂದು ರತ್ನಾಕರ್ ಅವರಿಗೆ ಅವರ ಚೇರ್ ಮೇಲೆ ಕೂಡಿಸಿದ. ಅಲ್ಲಿಯ ವರೆಗೆ ಆದ ವ್ಯವಹಾರದ ವೋಚರ್ ಗಳನ್ನು ಸಹಿ ಮಾಡಲು ಕಿಶೋರ್ ಹೇಳಿದ.
ಅಷ್ಟರಲ್ಲಿ ಪಕ್ಕದ ಗುಡಿಸಲು ಟೀ ಮಾಲೀಕ ರುದ್ರಪ್ಪ ಹುಣಿಸೆ ಮಠ ಗರಂ ಗರಂ ಚಹಾ ತುಂಬಿದ ಕೇಟ್ಲಿ ಹಾಗೂ ಪಾರ್ಲೆ ಬಿಸ್ಕಿಟ್ ಪ್ಯಾಕೆಟ್ ತಂದ. ಎಲ್ಲರಿಗೂ ಬಿಸ್ಕೆಟ್ ಜೊತೆಗೆ ಕಪ್ ನಲ್ಲಿ ಚಹಾ ಕೊಟ್ಟ. ರತ್ನಾಕರ್, ರುದ್ರೇಶ್ ಅವರ ಬಿಲ್ ಕೊಡಲು ಪರ್ಸ್ ನಿಂದ ಕ್ಯಾಶ್ ತೆಗೆದರು.
ಆಗ ರುದ್ರೇಶ್ “ಸಾರ್,ಈ ಬಿಲ್ ನನ್ನ ಎಸ್ ಬಿ ಅಕೌಂಟ್ ನಲ್ಲಿ ಹಾಕಿ ಎಂದು ಪಾಸ್ ಬುಕ್ ಕೊಟ್ಟ.
ಅಲ್ಲಿ ಇದ್ದವರು ರುದ್ರೇಶ್ ನ ಉಳಿತಾಯದ ಮನೋಭಾವ ನೋಡಿ ಆತನಿಗೆ ಪ್ರಶಂಶೆ ಮಾಡಿದರು.
ಆ ಸಮಯ ರತ್ನಾಕರ್ ಕಿರು ಭಾಷಣ ಮಾಡಿ ಎಲ್ಲರಿಗೂ ಧನ್ಯವಾದ ಹೇಳಿದ. ಗ್ರಾಹಕರು ತಮ್ಮ ಕೆಲಸ ಮುಗಿಸಿಕೊಂಡು ಹೋದರು.