ಆಚಾರ ವಿಲ್ಲದ ನಾಲಿಗೆ
(ನೀತಿ ಕಥೆ - ವಾಮನಾಚಾರ್ಯ)
ರಾಘವಪುರ್ ಪುರಸಭೆ ಪಕ್ಕದಲ್ಲಿ ಇರುವದು ದೊಡ್ಡ ಆಲದ ಮರ. ಅದರ ಕೆಳಗೆ ಇರುವದು ವಿಶಾಲವಾದ ಕಟ್ಟೆ. ಅದಕ್ಕೆ ಹರಟೆ ಕಟ್ಟೆ ಎನ್ನುವರು. ಅಂದು ಭಾನುವಾರ ಬೆಳಗ್ಗೆ ಎಂಟು ಗಂಟೆಗೆ ತಾಲೂಕು ಕಛೇರಿಯ ಮೂವರು ಸಿಬ್ಬಂದಿಗಳು ಹರಟೆ ಕಟ್ಟೆಗೆ ಒಬ್ಬೊಬ್ಬರಾಗಿ ಬಂದರು.
“ಮಯೂರಿ ಹಾಗೂ ಪ್ರಜ್ವಲ್ ಕೇವಲ ಒಂದು ತಿಂಗಳು ಹಿಂದೆ ತಾಲೂಕು ಕಛೇರಿಯಲ್ಲಿ ಕೆಲಸಕ್ಕೆ ಸೇರಿದವರು ಈಗ ಪ್ರೇಮಿಗಳು ಆಗಿ ಗುಪ್ತವಾಗಿ ಮದುವೆ ಕೂಡ ಆದರು.” ಎಂದು ಹರಟೆ ಪ್ರಾರಂಭ ಮಾಡಿದ ನಾರಾಯಣ, ವಿಲೇಜ್ ಅಕೌಂಟ0ಟ್.
“ಹೌದು! ಇದು ‘ವಿಚಿತ್ರ ಆದರೂ ಸತ್ಯ. ಇನ್ನೊಬ್ಬರ ವೈಯಕ್ತಿಕ ವ್ಯವಹಾರದ ಬಗ್ಗೆ ಮಾತಾಡಿದರೆ ಹರಟೆಗೆ ಮೆರುಗು ಬರುವದು,”ಎಂದ ದ್ವಿತೀಯ ದರ್ಜೆ ಗುಮಾಸ್ತ ಶಂಭುನಾಥ.
“ನಾವು ಇನ್ನೊಬ್ಬರ ಬಗ್ಗೆ ಮಾತಾಡುವದು ಒಂದು ತರಹದ ಮೋಜು. ಮಯೂರಿ ಹಾಗೂ ಪ್ರಜ್ವಲ್ ಬೇರೆ ಬೇರೆ ಊರಿನಿಂದ ಬಂದವರು, ಬೇರೆ ಬೇರೆ ಜಾತಿಯವರು ಅಲ್ಲದೇ ಇಬ್ಬರ ಸಂಸ್ಕೃತಿ ವಿಭಿನ್ನ. ಮಯೂರಿ ಕಪ್ಪು ಹಾಗೂ ದಪ್ಪ ಇದ್ದು ನೋಡಲು ಚೆನ್ನಾಗಿಲ್ಲ. ಪ್ರಜ್ವಲ್ ಸ್ಫೂರದೃಪಿ, ಸ್ವಭಾವ ದಿಂದ ಒಳ್ಳೆಯವನು. ಇಲ್ಲಿಂದ ಐದು ಕಿಲೋಮೀಟರ್ ದೂರ ಇರುವ ಗುಡ್ಡದೂರು ಗ್ರಾಮದ ಶ್ರೀಮಂತ ರೈತನ ಏಕೈಕ ಪುತ್ರ. ಅವನು ದ್ವಿತೀಯ ದರ್ಜೆ ಗುಮಾಸ್ತ ಎಂದು ಏಕೆ ಕೆಲಸಕ್ಕೆ ಸೇರಿದ? ಮಯೂರಿ ಎಲ್ಲಿಂದ ಬಂದಿರುವಳು? ಆಕೆ ಚರಿತ್ರೆ ಏನು? ಯಾರಿಗೂ ತಿಳಿದಿಲ್ಲ. ಆಕೆ ಪದವಿಧರೆ ಇದ್ದು ಪ್ರಥಮ ದರ್ಜೆ ಗುಮಾಸ್ತೆ. ಒಂದುವೇಳೆ ಪ್ರಜ್ವಲ್ ಕೆಲಸಕ್ಕೆ ಸೇರದಿದ್ದರೆ ಮಯೂರಿ ಪರಿಚಯ ಆಗುತ್ತಿರಲಿಲ್ಲ. ಇಬ್ಬರ ಜೋಡಿ ಮಿಸ್ ಮ್ಯಾಚಿಂಗ್," ಎಂದ ಮಹಾಂತೇಶ್ ರೆಕಾರ್ಡ್ ಕೀಪರ್.
“ಅದಕ್ಕೆ ಪ್ರೇಮ ಕುರುಡು ಅನ್ನುವರು. ಒಂದು ತಿಂಗಳು ಹಿಂದೆ ಅಪರಿಚಿತರು. ಆದರೆ ಇಂದು ಪ್ರೇಮಿಗಳು ನಂತರ ಫಟಾ ಫಟ್ ಪತಿ ಪತ್ನಿ ಆದರು. ಅವನ ಅಪ್ಪ ಅಮ್ಮ ನಿಗೆ ಮಗನ ಪ್ರೇಮ ಕತೆ ಗೊತ್ತಿದ್ದರೂ ಸುಮ್ಮನೆ ಇರುವದು ಮತ್ತೊಂದು ಆಶ್ಚರ್ಯ. ಇಂತಹ ಮದುವೆಗೆ ಅರ್ಥವಿಲ್ಲ. ನಾನು ಬಾಲಕನಿದ್ದಾಗ ಮದುವೆ ಆಟ ಆಡುತ್ತಿದ್ದೆ. ಹಾಗೆ ಆಯಿತು ಇವರ ವಿವಾಹ,”ಎಂದ ನಾರಾಯಣ.
ಎಲ್ಲರೂ ಕುಣಿದು ಕುಣಿದು ಜೋರಾಗಿ ನಕ್ಕರು.
“ಪ್ರೇಮಿಗಳ ಚೆಲ್ಲಾಟ ಮಿತಿ ಮೀರಿದೆ. ಇದು ಹದ್ದು ಬಸ್ತಿನಲ್ಲಿ ಇದ್ದರೆ ಒಳ್ಳೆಯದು. ಇವರು ಗೌಪ್ಯವಾಗಿ ಮದುವೆ ಇಷ್ಟು ಬೇಗ ಆಗಿರುವದು ಟಾಕ್ ಆಫ್ ದಿ ಟೌನ್ ಆಗಿದೆ,” ಎಂದ ಮಹಾಂತೇಶ್.
“ನಿಮಗೆ ಇನ್ನೊಂದು ವಿಷಯ ಗೊತ್ತಿದೆಯಾ?” ಎಂದು ಕೇಳಿದ ಶಂಭುನಾಥ್.
“ಅದೇನಯ್ಯ ಬೇಗ ಹೇಳು?” ಉಳಿದಿಬ್ಬರು ಒಂದೇ ಸಲ ಕೇಳಿದರು.
“ಮಯೂರಿ ವಿಧವೆ ಅಂತೆ. ಒಂದು ಮಗು ಕೂಡಾ ಇದೆಯಂತೆ. ಪ್ರಜ್ವಲ್ ನ ಆಸ್ತಿ ಮೇಲೆ ಆಕೆ ಕಣ್ಣು ಇದೆಯಂತೆ. ಅವರ ದಾಂಪತ್ಯ ಜೀವನ ಹೇಗೆ ಇದೆ ಗೊತ್ತಾ? ಪ್ರತಿ ದಿವಸ ಒಂದಿಲ್ಲ ಒಂದು ಕಾರಣಕ್ಕೆ ಜಗಳ ವಾಡುವರು. ಅವರ ದಿನನಿತ್ಯದ ಕೋಪ ತಾಪ ನೋಡಿದರೆ ಅವರಲ್ಲಿ ಬಿರುಕು ಆಗುವದು ಗ್ಯಾರೆಂಟಿ,” ಎಂದ ಮಹಾಂತೇಶ್.
“ಇದೆಲ್ಲ ನಿನಗೆ ಯಾರು ಹೇಳಿದರು?” ಎಂದು ಕೇಳಿದ ನಾರಾಯಣ.
“ನಮ್ಮಲ್ಲಿ ಇರುವ ಅಟೆಂಡರ್ ಮಣಿಕಂಠ.”
ಆಕಾಶದಲ್ಲಿ ಗುಡುಗು ಮಿಂಚು ಬರುವದನ್ನು ಗಮನಿಸಿದ ಶಂಭುನಾಥ,
"ಮೊದಲು ಮನೆಗೆ ನಡೆಯಿರಿ. ಮಳೆ ಬರುವ ಎಲ್ಲಾ ಲಕ್ಷಣಗಳು ಇವೆ.” ಎಂದ ನಾರಾಯಣ.
ಅವರು ಏಳುವದಕ್ಕೂ ಜೋರಾಗಿ ಮಳೆ ಬರುವದಕ್ಕೂ ಸರಿ ಆಯಿತು. ಓಡುತ್ತ ಹೋಗಿ ತಮ್ಮ ತಮ್ಮ ಮನೆ ಗಳಿಗೆ ಹೋದರು.
******
ಪ್ರೇಮಿಗಳು ಮದುವೆ ಆದರೂ ಕೆಲವು ದಿವಸ ಬೇರೆ ಬೇರೆ ಇದ್ದರು. ಒಂದು ದಿವಸ ಬೆಳಗ್ಗೆ ಪ್ರಜ್ವಲ್ ತನ್ನ ಪತ್ನಿಗೆ,
“ಮಯೂರಿ, ಇನ್ನೆಷ್ಟು ದಿವಸ ಬೇರೆ ಬೇರೆ ಇರುವದು? ನನಗೆ ಗೊತ್ತಿರುವ ಒಂದು ಮನೆ ಬಾಡಿಗೆಗೆ ಇದೆ. ಇಂದು ಭಾನುವಾರ ನಿನಗೂ ಕೆಲಸ ಇಲ್ಲ. ನನಗೂ ಕೆಲಸ ಇಲ್ಲ. ಆ ಮನೆ ನೋಡಲು ಗಾಂಧಿ ಸರ್ಕಲ್ ಪಕ್ಕದ ಧನವಂತ್ರಿ ಮೆಡಿಕಲ್ ಸ್ಟೋರ್ ಮುಂದೆ ಸರಿಯಾಗಿ ಬೆಳಗ್ಗೆ ಒಂಭತ್ತು ಗಂಟೆಗೆ ಬಾ ದಾರಿ ಕಾಯುವೆ,” ಎಂದು ಹೇಳಿದ.
ಆಕೆ ಸರಿ ಎಂದು ಸಮಯಕ್ಕೆ ಸರಿಯಾಗಿ ಬಂದಳು.ಇಬ್ಬರೂ ಸ್ವಲ್ಪ ಮುಂದೆ ಹೋದರು. ಆ ಮನೆ ಮುಂದೆ ಬಂದಾಗ, ಪ್ರಜ್ವಲ್ ಆಕೆಗೆ ಇದೆ ಮನೆ ಎಂದು ತೋರಿಸಿದ.
ಬಾಡಿಗೆ ಮನೆ ಮೂರನೇ ಅಂತಸ್ತಿನ ಮೇಲೆ ಇರುವದರಿಂದ ಮೇಲೆ ಹೋದರು.
ಆಗ ಆಕೆ,
"ಇದೇನ್ರೀ, ಹದಿನೈದು ಮೆಟ್ಟಿಲುಗಳು ಹತ್ತಿ ಬಂದ ಮೇಲೆ ಮೂರನೇ ಅಂತಸ್ತಿನಲ್ಲಿ ಇದೇನಾ ಬಾಡಿಗೆ ಮನೆ? ನಿಮಗೆ ಬೇರೆ ಮನೆ ಸಿಗಲಿಲ್ವಾ?" ಎಂದಳು.
"ಮಯೂರಿ, ಈ ಮನೆಗೆ ಆಗಿರುವದಾದರೂ ಏನು? ಈ ಮನೆ ಸಿಗಲು ನನಗೆ ಎಷ್ಟು ಶ್ರಮ ಆಯಿತು ಗೊತ್ತೇ?”
ರಾಘವಪುರ್ ನಗರದ ಮಾತುಂಗಾ ಬಡಾವಣೆಯ ಮೂರನೇ ರಸ್ತೆಯಲ್ಲಿ ಇರುವ ‘ಶಾಂತಿ’ ಮನೆಯ ಮೂರನೆ ಮಹಡಿ. ವಾಸ್ತು ದೋಷ ಕೂಡಿರುವ ಈ ಮನೆ ನೋಡಿ ಆಕೆಗೆ ತುಂಬಾ ಅಸಮಾಧಾನ ವಾಯಿತು. ಆಕೆ ವಾಸ್ತು ಶಾಸ್ತ್ರದ ಪರಿಣಿತೆ ಅಲ್ಲದಿದ್ದರೂ ಪುಸ್ತಕಗಳು ಓದಿದ್ದಳು. ಎಷ್ಟೋ ಜನರು ಆಕೆಯ ಸಲಹೆಗಳನ್ನು ಪಡೆದಿದ್ದರು.
“ಏನ್ರಿ, ಈ ಮನೆ ಮುಖ್ಯ ದ್ವಾರ ದಕ್ಷಿಣಾಭಿ ಮುಖವಾಗಿದೆ. ಅಡುಗೆ ಮನೆ ಅಗ್ನಿ ಮೂಲದಲ್ಲಿ ಇಲ್ಲ. ಮನೆ ಯಲ್ಲಿ ಗಾಳಿ ಬೆಳಕು ಇವುಗಳ ಅಭಾವ ಇರುವದರಿಂದ ವಾಸಿಸಲು ಈ ಮನೆ ನಿರಪಯುಕ್ತ ವಾಗಿದೆ.”
ಇವರಿಬ್ಬರ ಜೋರಾದ ಸಂಭಾಷಣೆ ಕೇಳಿದ ಮನೆ ಯಜಮಾನ ಮಹಾದೇವ ಬಂದು ಪರಿಸ್ಥಿತಿ ಶಾಂತವಾಗಲೂ ಪ್ರಯತ್ನ ಮಾಡಿದ. ಮಹದೇವ್ ಪ್ರಜ್ವಲ್ ತಂದೆಯ ಬಾಲ್ಯ ಸ್ನೇಹಿತ ಇದ್ದು ಆಕೆಯ ಅನುಮಾನಗಳನ್ನು ನಿವಾರಿಸುವ ಪ್ರಯತ್ನದಲ್ಲಿ ವಿಫಲರಾಗಿ ನಿರಾಸೆ ಆಗಿ ಹೊರಟು ಹೋದ.
“ಮದುವೆ ಆಗುವ ಮೊದಲು ಇದೆ ಮನೆಯಲ್ಲಿ ಒಂದು ವರ್ಷ ಇದ್ದೆ,” ಎಂದ ಪ್ರಜ್ವಲ್.
ಇದನ್ನು ಕೇಳಿದ ಆಕೆಗೆ ಮತ್ತಷ್ಟು ಕೋಪ ಬಂದಿತು.
ಪರಿಸ್ಥಿತಿ ಅರಿತ ಪತಿರಾಯ,
“ಮಯೂರಿ, ನಿನಗೆ ಬೇಡ ವಾದರೆ ನನಗೂ ಬೇಡ. ಬೇರೆ ಮನೆ ಹುಡುಕುವ ಪ್ರಯತ್ನ ಮಾಡುವೆ.” ಎಂದು ಆಕೆಯ ಕೋಪ ಶಮನ ಗೊಳಿಸಿದ.
ಈ ಮನೆ ಬಾಡಿಗೆ ತುಂಬಾ ಕಡಿಮೆ. ಇದ್ದರೂ ಪತ್ನಿಯ ಇಚ್ಛೆ ವಿರುದ್ಧ ಹೋಗಬಾರದು ಎಂದು ಈ ಮನೆ ಕ್ಯಾನ್ಸಲ್ ಮಾಡಿದ. ಯಾವುದೇ ಸಮಸ್ಯೆ ಉದ್ಭವ ಆದರೆ ತಕ್ಷಣ ಪರಿಹಾರ ಹುಡುಕುವುದು ಉತ್ತಮ. ಅದು ಬಿಟ್ಟು ಸಮಸ್ಯೆಯನ್ನು ವಿನಾಕಾರಣ ಮುಂದುವರೆಸಿ ತಾನು ಮಾಡಿದ್ದೇ ಸರಿ ಎನ್ನುವ ಹಠಮಾರಿತನ ಮಾಡಿದರೆ ಆಗುವದು ಸಮಸ್ಯ ಇನ್ನಷ್ಟು ಕಠಿಣ ಎನ್ನುವ ಪರಿಜ್ಞಾನ ಅವನಿಗೆ ಬಂದಿತು.
ಮುಂದೆ ಒಂದು ವಾರ ಆದಮೇಲೆ ಇಬ್ಬರಿಗೂ ಒಪ್ಪಿಗೆ ಆಗುವ ಒಂದು ಮನೆ ಸಿಕ್ಕು ಅಲ್ಲಿಯೇ ತಮ್ಮ ದಾಂಪತ್ಯ ಜೀವನ ಪ್ರಾರಂಭ ಮಾಡಿ ದರು.
ಮೊದಲ ದಿವಸವೇ ದಂಪತಿಗಳಿಗೆ ಮರೆಯಲಾಗದ ಅನುಭವ ಆಯಿತು. ಮನೆ ಮಾಲಕನ ಹದಿಮೂರು ವರ್ಷದ ಮಗ ಕಿಲಾಡಿ ಹುಡುಗ ಕರೆಯದೆ ಅವನು ಮನೆ ಒಳಗೆ ಬಂದು ಆಸನದ ಮೇಲೆ ಕುಳಿತು ಅಲ್ಲಿದ್ದ ವೃತ್ತ ಪತ್ರಿಕೆ ಓದಿ, ಟಿವಿ ರಿಮೋಟ್ ಹುಡುಕಿ ಟಿವಿ ಆನ್ ಮಾಡಿ ತನಗೆ ಬೇಕಾದ ಗೇಮ್ಸ್ ಹಚ್ಚಿ ತನ್ನಷ್ಟಕ್ಕೆ ತಾನು ನಗುವದನ್ನು ನೋಡಿದರು. ಮೊದಲನೇ ಸಲ ಅವನ ಹುಚ್ಚಾಟ ದಂಪತಿಗಳು ಸಹಿಸಿ ಕೊಂಡರು. ಎರಡನೇ ಸಲ ಬೆಳಗ್ಗೆ ಒಳಗೆ ಪ್ರವೇಶ ಮಾಡಿದ ಚೇರ್ ಇರಲಿಲ್ಲ.
“ನಾನು ಎಲ್ಲಿ ಕೂಡಲಿ?”ಎಂದ.
ಮಯೂರಿ ಗೆ ಸಿಟ್ಟು ತಡೆಯಲು ಆಗದೇ,
“ಇನ್ನೊಬ್ಬರ ಮನೆಗೆ ನೀನು ಬರಬಾರದು ಹೋಗು,” ಎಂದಳು.
ಅವನು ಅಳುತ್ತ ತನ್ನ ಅಮ್ಮನಿಗೆ ಆಗಿರುವದನ್ನು ವಿವರಿಸಿದ. ಆಕೆ ಗೆ ಕೋಪ ಬರದೇ ಮಯೂರಿಗೆ ಹೇಳಿದಳು,
“ನೋಡಿ, ನನ್ನ ಮಗ ತಿಳಿಯದೆ ಮಾಡಿರುವನು ಕ್ಷಮಿಸಿ. ಅವನು ಮಾನಸಿಕ ರೋಗಿ.”
ಇದನ್ನು ಕೇಳಿದ ಮಯೂರಿ ಆ ಹುಡುಗನ ಮೇಲೆ ಕನಿಕರ ಬಂದಿತು. ಹೊರಗಡೆ ಹೋದ ಪತಿ ಮನೆಗೆ ಬಂದಮೇಲೆ ಆ ಹುಡುಗನ ಬಗ್ಗೆ ಹೇಳಿದಳು.
ಅದಕ್ಕೆ ಪ್ರಜ್ವಲ್,
“ಇದಕ್ಕೆ ಒಂದೇ ಒಂದು ಪರಿಹಾರ ಈ ಮನೆ ಬಿಟ್ಟು ಬೇರೆ ಮನೆಗೆ ಹೋಗುವದು.”
ಮಯೂರಿಗೂ ಅದು ಸರಿ ಎನಿಸಿತು. ಮುಂದೆ ಒಂದು ತಿಂಗಳು ಆದಮೇಲೆ ಬೇರೆ ಮನೆಗೆ ಹೋದರು.
ಬಾಡಿಗೆ ಮನೆ ಎಂದರೆ ಒಂದಿಲ್ಲ ಒಂದು ಸಮಸ್ಯ ಇರುವದು ಸಹಜ. ಮನೆ ಯಜಮಾನನ ಕುಟುಂಬದ ಜೊತೆಗೆ ಉತ್ತಮ ಸಂಭಂದ ಇಟ್ಟು ಕೊಂಡರೆ ಯಾವ ತರಹದ ಸಮಸ್ಯೆ ಉದ್ಭವ ಆಗುವದಿಲ್ಲ. ಆದರೆ ಈ ನೂತನ ದಂಪತಿ ಮೇಲಿಂದಮೇಲೆ ಮನೆ ಬದಲಾಯಿಸುವದನ್ನು ಗಮನಿಸಿದ ಮನೆ ಮಾಲಕರು ಇವರಿಗೆ ಮನೆ ಬಾಡಿಗೆ ಕೊಡ ಬಾರದು ಎಂದು ನಿರ್ಧಾರ ಮಾಡಿದರು. ಈ ಸುದ್ದಿ ರಾಘವಪುರ್ ದಲ್ಲಿ ಹರಡುವ ದಕ್ಕೆ ತಡವಾಗಲಿಲ್ಲ.
****
ಅದೇ ಹರಟೆ ಹೊಡೆಯುವ ಸಹೋದ್ಯೋಗಿ ಗಳು ಮತ್ತೊಂದು ಭಾನುವಾರ ಬೆಳಗ್ಗೆ ಹರಟೆ ಕಟ್ಟೆ ಮೇಲೆ ಸೇರಿದರು.
“ಮಯೂರಿ ಹಾಗೂ ಪ್ರಜ್ವಲ್ ಜಗಳಗಂಟರು ಎಂದು ಜಗಜ್ಜಾಹಿರ ವಾಗಿದೆ. ಬಾಡಿಗೆ ಮನೆ ಮಾಲಕರು ಇವರ ಸ್ವಭಾವ ನೋಡಿ ಬೇಗ ಮನೆ ಬಿಡಿಸಿದರು. ಈಗ ಅವರಿಗೆ ಯಾರೂ ಮನೆ ಬಾಡಿಗೆ ಕೊಡುವದಿಲ್ಲ.ಅವರಿಗೆ ಉಳಿದಿರು ವದು ಒಂದೇ. ಈ ಊರು ಬಿಟ್ಟು ಬೇರೆ ಊರಿಗೆ ಹೋಗಬೇಕು,” ಎಂದ ನಾರಾಯಣ.
“ಬರಿ ಅವರು ಮನೆಯಲ್ಲಿ ಅಷ್ಟೇ ಅಲ್ಲ ಆಫೀಸಿನಲ್ಲೂ ಜಗಳವಾಡುವರು. ಸಾಹೇಬರು ಇಬ್ಬರನ್ನು ಕರೆದು ವಾರ್ನ್ ಮಾಡಿದ್ದಾರೆ,” ಎಂದ ಶಂಭುನಾಥ್.
“ಇವರು ಹೀಗೆ ಮುಂದುವರೆದರೆ ಇಬ್ಬರನ್ನೂ ಇಲ್ಲಿಂದ ಎತ್ತ0ಗಡಿ ಮಾಡುವರು,” ಎಂದ ಮಹಾಂತೇಶ್.
ಈ ಮಹಾಶಯರು ಹರಟೆಯಲ್ಲಿ ತಮ್ಮ ತೇಜೋವಧೆ ಮಾಡುತ್ತಿರುವದು ಮಯೂರಿ, ಪ್ರಜ್ವಲ್ ಗೆ ಅವರಿಗೆ ಬೇಕಾದವರು ತಿಳಿಸಿದರು. ಈ ಸಲ ಅವರ ಹರಟೆ ಸಮಯದಲ್ಲಿ ದಂಪತಿ ಮರದ ಹಿಂದೆ ನಿಂತವರು ಎಲ್ಲವನ್ನೂ ಕೇಳಿ ಹರಟೆ ಮಲ್ಲರಿಗೆ ಪ್ರತ್ಯಕ್ಷ ರಾದರು.
ಇವರನ್ನು ಕಂಡು ಗಲಿಬಿಲಿ ಆದ ಅವರು ಪಲಾಯನ ಮಾಡುವ ಪ್ರಯತ್ನ ದಲ್ಲಿ ಇರುವಾಗ ಇಬ್ಬರು ಯುವಕರು ಬಂದು ಅವರನ್ನು ಹೋಗದಂತೆ ನಿಲ್ಲಿಸಿದರು.
“ನಮ್ಮ ಬಗ್ಗೆ ಅಲ್ಲ ಸಲ್ಲದ ಮಾತನಾಡುವದಕ್ಕೆ ನಿಮಗೆ ನಾಚಿಕೆ ಆಗಲ್ವೆ?” ಎಂದು ಮಯೂರಿ ಅವರಿಗೆ ಛಿಮಾರಿ ಹಾಕಿದಳು.
“ನಾವಿಬ್ಬರು ಬೇರೆ ಬೇರೆ ಜಾತಿ, ಸಂಸ್ಕಾರ ಬೇರೆ, ಹಿರಿಯರ ಇಚ್ಛೆ ವಿರುದ್ದ ಪ್ರೀತಿಸಿ ಯಾರಿಗೂ ಹೇಳದೆ ಮದುವೆ ಆಗಿರುವ ಆರೋಪ ಯಾಕೆ ಮಾಡಿದಿರಿ? ನಮ್ಮ ಬಗ್ಗೆ ನಿಮಗೆ ಸುಳ್ಳು ಮಾಹಿತಿ ಕೊಟ್ಟವರು ಯಾರು?,” ಎಂದ ಪ್ರಜ್ವಲ್ ಕೋಪದಿಂದ.
“ನಿಮಗೇಕೆ ಇನ್ನೊಬ್ಬರ ಕಾರಭಾರ? ಮಯೂರಿ ಹಾಗೂ ಪ್ರಜ್ವಲ್ ಗೌರವಾನ್ವಿತ ಕುಟುಂಬದಿಂದ ಬಂದವರು. ಅವರು ಹಿರಿಯರ ಒಪ್ಪಿಗೆ ಆದಮೇಲೆ ಮದುವೆ ಆಗಿರುವರು. ರಾಘವ ಪುರ್ ನಂಥ ಸಣ್ಣ ನಗರದಲ್ಲಿ ನೀವು ಮಾಡಿದ ತಲೆ ಹರಟೆ ಒಬ್ಬರ ಬಾಯಿಯಿಂದ ಇನ್ನೊಬ್ಬರ ಬಾಯಿಗೆ ಹೋಗಿ ಅದು ಗಂಭೀರ ಸ್ವರೂಪದಲ್ಲಿ ಕೊನೆಗೂಳ್ಳು ವದು. ಅಷ್ಟೇ ಅಲ್ಲ ನೀವು ಫಜೀತಿಯಲ್ಲಿ ಸಿಕ್ಕಿಹಾಕಿ ಕೊಳ್ಳುವಿರಿ. ಅವರಿಗೆ ಕ್ಷಮಾಪಣೆ ಕೇಳಿರಿ ಇಲ್ಲದೆ ಹೋದರೆ ನಿಮ್ಮ ವಿರುದ್ದ ಕಾನೂನು ಕ್ರಮ ತೆಗೆದು ಕೊಳ್ಳಲಾಗುವದು. ಹರಟೆ ಹೊಡೆಯ ಬೇಕಾದರೆ ಉಪಯುಕ್ತ, ಜ್ಞಾನವರ್ಧಕ ವಿಷಯಗಳನ್ನು ಆಯ್ಕೆ ಮಾಡಿ,” ಎಂದು ಆಗತಾನೆ ಜಿಪ್ ನಲ್ಲಿ ಬಂದ ತಹಸೀಲ್ದಾರ್ ಕಿರಣ್ ಕುಮಾರ್, ಹೇಳಿ ಹೋಗಿಯೇ ಬಿಟ್ಟರು.
ತ್ರಿಮೂರ್ತಿಗಳಿಗೆ ತಾವು ವಿನಾಕಾರಣ ಇನ್ನೊಬ್ಬರ ಮನಸ್ಸು ನೋಯಿಸಿರುವದು ಅಕ್ಷಮ್ಯ ಅಪರಾಧ ಎಂದು ತಿಳಿದು ಮಯೂರಿ, ಪ್ರಜ್ವಲ್ ಅವರಿಗೆ ಕೈ ಜೋಡಿಸಿ ಕ್ಷಮಾಪಣೆ ಕೇಳಿದರು.
ಆಗ ಮಯೂರಿ ಆ ಮೂವರಿಗೆ,
“ಪುರಂದರ ದಾಸರ ಹಾಡು, ‘ಆಚಾರ ವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ’ ನಿಮಗೆ ಗೊತ್ತಿದೆಯಾ? ಇದನ್ನು ದಿನಾಲು ಪಠಣ ಮಾಡಿ ಒಳ್ಳೇಯ ಮನುಷ್ಯರು ಆಗಿ,” ಎಂದಳು.