ದಂಪತಿ ಅಂದರೆ ಹೀಗಿರಬೇಕು
(ಹಿರಿಯ ದಂಪತಿ- ಸ್ವಾರಸ್ಯ ಕಥೆ)
ಲೇಖಕ ವಾಮನಾಚಾರ್ಯ
ಅದೇ ವರ್ಷ ಸೇವೆಯಿಂದ ನಿವೃತ್ತ ರಾದ ದಂಪತಿ ಘನಶ್ಯಾಮ್ ಹಾಗೂ ಶ್ಯಾಮಲಾ, ಸುರ್ಯಾ ಹೌಸಿಂಗ್
ಬೋರ್ಡ್ ಕಾಲನಿ, ರಾಘವಪುರ ನಗರ ದಲ್ಲಿ ಇರುವ ತಮ್ಮ ಸ್ವಂತ ಮನೆಯಲ್ಲಿ ವಾಸವಾಗಿದ್ದರು. ಸಮಯ ಮಧ್ಯಾಹ್ನ ಹನ್ನೆರಡು ಗಂಟೆ. ಡೋರ್ ಬೆಲ್ ರಿಂಗ್ ಆಗುತ್ತಾ ಇರುವದನ್ನು ಗಮನಿಸಿದ ಶ್ಯಾಮಲಾ ಯಾರು ಎಂದು ಕಿಟಕಿಯಿಂದ ಕೇಳಿದಳು. ಕೊರಿಯರ್ ಬಾಯ್ ಕಿಟಕಿಯಿಂದಲೇ ಕವರ್ ಕೊಟ್ಟ.
"ಶ್ಯಾಮ್ ಎಲ್ಲಿದ್ದಿರಿ? ನಿಮಗೆ ಕೊರಿಯರ್ ಬಂದಿದೆ."
ಅವರು ಮನೆಯ ಹಿಂದೆ ಹಿತ್ತಲು ಅಲ್ಲಿ ಇರುವ ಬಾಲ್ಕನಿಯಲ್ಲಿ ಯೂಟ್ಯೂಬ್ ನಲ್ಲಿ ಚಲನ ಚಿತ್ರ ಹಾಡನ್ನು ಕೇಳುತ್ತಾ ಡಾನ್ಸ್ ಮಾಡುತ್ತ ಇರುವಾಗ ಪತ್ನಿಯ ಕರೆ ಬಂದ ಕೂಡಲೇ ಓಡುತ್ತ ಬಂದು ಕವರ್ ತೆಗೆದು ಕೊಂಡರು.
"ಪತಿ ಮಹಾಶಯರೇ, ಇದೇನು ನಿಮ್ಮ ಅವತಾರ? ಈ ವಯಸ್ಸಿನಲ್ಲಿ ಯುವಕರ ಹಾಗೆ ಚಡ್ಡಿ, ಡಿಜೈನರ್ ಟೀ ಶರ್ಟ್ ,ಅದರ ಮೇಲೆ ಐ ಲವ್ ಯು ಬರವಣಿಗೆ, ತಲೆಯಲ್ಲಿ ಹುಡುಕಿದರೂ ಒಂದೂ ಕೂದಲು ಸಿಗದ ಬೊಕ್ಕ ತಲೆ. ನೀವು ಕುಣಿಯುತ್ತ ಇರುವದನ್ನು ನೋಡಿದವರು ನಗ ಬೇಕು ಇಲ್ಲ ಬಯ್ಯಬೇಕು ಹೇಳಿ?"
"ಶ್ಯಾಮಲ, ಈಗ ನೀನೇ ನನ್ನನ್ನು ನೋಡುತ್ತಾ ಇದ್ದಿ. ನಿನಗೆ ಹೇಗೆ ಅನಿಸುತ್ತೆ ಹಾಗೆ ಮಾಡು. ನಿನಗೆ ಖುಷಿ ಆದರೆ ಅದು ನನಗೂ ಖುಷಿ."
ಉತ್ಸುಕತೆಯಿಂದ ಕವರ್ ನಲ್ಲಿ ಇರುವದನ್ನು ನೋಡಿದ ಮೇಲೆ ಶ್ಯಾಮ್ ಅವರ ಮುಖದಲ್ಲಿ ಕಾಣುವ ಮಂದಹಾಸ ಗಮನಿಸಿದ ಶ್ಯಾಮಲಾ,
"ಏನ್ರೀ, ಸಂತಸದ ವಿಷಯವೇ? ನಿಮ್ಮ ಸಂತಸದಲ್ಲಿ ನಾನು ಭಾಗಿ ಆಗಬಹುದೇ? ಎಂದಳು
ಆಕೆ ಎದುರಿಗೆ ನಿಂತಿರುವದನ್ನು ನೋಡಿ ಅದೇ ತಾನೆ ಕೇಳಿದ ಚಲನ ಚಿತ್ರದ ಸಂಗೀತ 'ನೀ ಬಂದು ನಿಂತಾಗ ನಿಂತು ನೀ ನಕ್ಕಾಗ ಸೋತೆ ನಾನಾಗ' ಎಂದು ಪತ್ನಿ ಎದುರಿಗೆ ನಟನೆ ಹಾಗೂ ಡಾನ್ಸ ಮಾಡುತ್ತ,
"ಶ್ಯಾಮಲಾ, ನೀನು ನನ್ನ ಸಹಧರ್ಮಿಣಿ. ಈ ಸಂತೋಷ ನಿನ್ನ ಜೊತೆಗೆ ಹಂಚಿಕೊಳ್ಳದೇ ಮತ್ತೆ ಬೇರೆ ಯಾರ ಜೊತೆಗೆ ಹಂಚಿಕೊಳ್ಳಲಿ?"
"ಶ್ಯಾಮ್ ಅವರೇ ನಿಮ್ಮ ಚಲನ ಚಿತ್ರದ ಹಾಡುಗಳು ಹಾಗೂ ಸಿನೆಮಾ ಡೈಲಾಗ್ ಗಳನ್ನು ನಾನು ಕಳೆದ ಮೂವತ್ತೈದು ವರ್ಷಗಳಿಂದ ಕೇಳುತ್ತಾ ಬಂದಿದ್ದೇನೆ. ಮೊದಲು ಕವರ್ ನಲ್ಲಿ ಏನು ಇದೆ ಬೇಗ ಹೇಳಿ?"
"ಶ್ಯಾಮಲಾ, ಸ್ವಲ್ಪ ತಾಳ್ಮೆ ಇರಲಿ. ತಾಂತ್ರಿಕ ಸಮಸ್ಯೆ ನಿನಗೆ ಅರ್ಥ ವಾಗುವದಿಲ್ಲ. ಅದಕ್ಕಾಗಿ ಸುಮ್ಮನೆ ಕೇಳು. ನಡುವೆ ಪ್ರಶ್ನೆ ಮಾಡಬೇಡ. ನಾನು ಕೆಲಸ ಮಾಡಿದ ಪ್ರಿಯ ರಂಜನ್ ಸ್ಟೀಲ್ ಕಂಪನಿಯವರು ನಿವೃತ್ತ ಮೆಕ್ಯಾನಿಕಲ್ ಇಂಜನಿಯರ್ ಆದ ನನಗೆ ಯಾಂತ್ರಿಕ ದೋಷ ಸರಿಪಡಿಸಲು ಒಂದು ದಿವಸ ಕರೆ ಮಾಡಿದರು. ಒಂದು ಗಂಟೆ ಅವಧಿಯಲ್ಲಿ ಎಲ್ಲವೂ ಸರಿಮಾಡಿದೆ. ಆಗ ನನಗೆ ಸಂಭಾವನೆ ಎಷ್ಟು ಕೊಡಬೇಕು ಎಂದಾಗ ನಾನು ನನ್ನ ವೈಯಕ್ತಿಕ ಖರ್ಚು ರೂಪಾಯಿ 1/- ಟೆಕ್ನಿಕಲ್ ನಾಲೇಜ್ ಗೆ ರೂಪಾಯಿ 24999/- ಎಂದು ಹೇಳಿದೆ. ಆಗ ಕಂಪನಿಯ ಅಕೌಂಟ್ಸ ಮ್ಯಾನೇಜರ್ ದರ್ಶನ್,
"ನೀನು ಹಾಸ್ಯಗಾರ ಕಣೋ." ಎಂದು ನನ್ನ ಹೆಗಲಮೇಲೆ ಕೈ ಇಟ್ಟು ನಗುತ್ತ ಹೇಳಿದರು. ಅದೇ ಈಗ ಬಂದಿರುವ 25 ಸಾವಿರ ರೂಪಾಯಿಯ ಚೆಕ್."
"ನಿಜಕ್ಕೂ ಕಂಪನಿಯವರು ನಿಮ್ಮ ಕೆಲಸಕ್ಕೆ ಇಷ್ಟು ಸಂಭಾವನೆ ಕೊಟ್ಟಿರುವದು ಆಶ್ಚರ್ಯ. ಒಂದು ಮಾತು ಸತ್ಯ. ನೀವು ಬಡಾಯಿ ಕೊಚ್ಚಿ ಕೊಳ್ಳುವದರಲ್ಲಿ ನಿಸ್ಸೀಮರು. ಆದರೆ ನಾನು ಮಾಡಿದ ಕೆಲಸದ ಮುಂದೆ ನಿಮ್ಮದು ಘನಂದಾರಿ ಕೆಲಸ ಏನೂ ಅಲ್ಲ."
"ಶ್ಯಾಮಲಾ, ನಿನ್ನ ಮಾತು ಹಾಸ್ಯಧ ಧಾಟಿಯಲ್ಲಿ ಮಿತಿಮೀರಿ ಹೋಗುತ್ತ ಇದೆ. ಹಾಸ್ಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ನಿನ್ನಲ್ಲಿ ಇರುವ ಅಹಂ ಅದು ಒಳ್ಳೆಯದು ಅಲ್ಲ. ನೀನು ಮಾಡಿದ ಘನಂದಾರಿ ಕೆಲಸ ವಾದಾದರೂ ಏನು? ಬೇಗ ಹೇಳು."
"ಸ್ವಲ್ಪ ತಡೆಯಿರಿ ಪತಿ ಮಹಾಶಯರೇ. ನಾನು ಪ್ರಜ್ಞಾ ಕಲಾ ಮತ್ತು ವಿಜ್ಞಾನ ಕಾಲೇಜ್ ನಲ್ಲಿ ಲೈಬ್ರರಿಯನ್ ಎಂದು ಕೆಲಸ ಮಾಡುವಾಗ ಒಂದು ಲಕ್ಷಕ್ಕೂ ಮೇಲ್ಪಟ್ಟ ಪುಸ್ತಕಗಳು (ಕನ್ನಡ, ಹಿಂದಿ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಸೇರಿ) ಇರುವ ದೊಡ್ಡ ವಾಚನಾಲಯ. ಕಾಲೇಜಿನ ವಿದ್ಯಾರ್ಥಿಗಳು, ಬೋಧಕರು ಮತ್ತು ಇತರ ಸಿಬ್ಬಂದಿ ವರ್ಗದವರು ಕಪಾಟಿನಲ್ಲಿ ಇರುವ ಪುಸ್ತಕ ತೆಗೆದುಕೊಂಡು ಓದಿದ ಮೇಲೆ ಕೆಲವರು ಟೇಬಲ್ ಮೇಲೆ ಇಡುವರು. ಕೆಲವರಂತೂ ನೆಲದಮೇಲೆ ಇಡುವರು. ಇನ್ನೂ ಕೆಲವರು ವಾಚನಾಲಯದ ಹೊರಗಡೆ ಇರುವ ದೊಡ್ಡ ಆಲದ ಮರದ ಕೆಳಗೆ ಇರುವ ಕಟ್ಟೆ ಮೇಲೆ ಕುಳಿತು ಅಲ್ಲಿಯೇ ಪುಸ್ತಕ ಬಿಟ್ಟು ಹೋಗುವರು. ಸಾಯಂಕಾಲ ಎಲ್ಲ ಪುಸ್ತಕಗಳನ್ನು ಹುಡುಕಿ ತಂದು ಆಯಾ ಕಪಾಟುಗಳಲ್ಲಿ ಇಡುವದಕ್ಕೆ ಹೆಚ್ಚಿನ ಸಮಯ ಕೆಲಸ ಮಾಡುವ ಅನಿವಾರ್ಯತೆ. ಇಡೀ ವರ್ಷ ಒಂದೂ ಕಂಪ್ಲೇಂಟ್ ಬರದೇ ವಾಚನಾಲಯದ ಕೆಲಸಗಳು ಅಚ್ಚು ಕಟ್ಟಾಗಿ ಮಾಡಿದೆ. ಇದು ಕಾಲೇಜಿನ ಆಡಳಿತ ವರ್ಗಕ್ಕೆ ಮೆಚ್ಚುಗೆ ಆಯಿತು. ಆ ವರ್ಷವೇ ನನಗೆ ನಿವೃತ್ತಿ ಇರುವದರಿಂದ 'ಬೆಸ್ಟ್ ಲೈಬ್ರರಿಯನ್ ಆಫ ದಿ ಕಾಲೇಜ್ ೨೦೧೦ ಎನ್ನುವ ಪ್ರಶಸ್ತಿ ಪತ್ರ, ರೂಪಾಯಿ ಹತ್ತು ಸಾವಿರ ನಗದು ಹಾಗೂ ಹಾರ ತುರಾಯಿಯಿಂದ ಸನ್ಮಾನ ಮಾಡಿದರು. ಆ ಕಾರ್ಯಕ್ರಮದಲ್ಲಿ ಕಾಲೇಜು ಪ್ರಾ೦ಶುಪಾಲರು ನನ್ನ ಕರ್ತವ್ಯ ನಿಷ್ಠೆ ಕೊಂಡಾಡಿದರು. ಇದೆಲ್ಲ ನಿಮಗೆ ಗೊತ್ತು."
"ಶ್ಯಾಮಲಾ, ನೀನು ಒಳ್ಳೆಯ ಕೆಲಸ ಮಾಡಿರುವದು ನಿಜವಾಗಿಯೂ ಹೆಮ್ಮೆಯ ಕೆಲಸ. ಪುಸ್ತಕ ಜೋಡಿಸುವದು, ಕಾಪಾಟಿನಲ್ಲಿ ಇಡುವದು ಈ ಕೆಲಸ ಯಾರು ಬೇಕಾದವರೂ ಮಾಡಬಹುದು. ಆದರೆ ನಮ್ಮ ತಾಂತ್ರಿಕ ಕೆಲಸ ಹಾಗಿಲ್ಲ."
"ಶ್ಯಾಮ್, ನಾನು ಮಾಡಿದ ಕೆಲಸ ಬರಿ ಪುಸ್ತಕ ಜೋಡಿಸುವುದು ಕಪಾಟಿನಲ್ಲಿ ಇಡುವದು ಅಲ್ಲ. ಆ ಪುಸ್ತಕಗಳನ್ನು ವಿಷಯಾಧಾರಿತ ಖಾನೆ ಇರುವ ಕಪಾಟಿ
ನಲ್ಲಿ ಇಡಬೇಕು.ಈಗ ನಮ್ಮಿಬ್ಬರಲ್ಲಿ ವಿನಾಕಾರಣ ಸ್ಪರ್ಧೆ ಏಕೆ? ತಮಾಷೆ ಮಾಡುವದರಿಂದ ಮನಸ್ಸಿಗೆ ಮುದ ಕೊಡುವದು ಅಷ್ಟೇ."
ಹಿರಿಯ ದಂಪತಿ ನಡುವೆ ಇಂತಹ ಹಾಸ್ಯ ಪ್ರಸಂಗಗಳು ಆಗುವದು ಸಾಮಾನ್ಯ.
ಪ್ರತಿ ದಿವಸ ಸಾಯಂಕಾಲ ಶ್ಯಾಮಲಾ ಸಮೀಪದಲ್ಲೇ ಇರುವ ಅಂಜನೇಯ ದೇವಸ್ಥಾನದಲ್ಲಿ ನಡೆಯುವ ಪ್ರವಚನ ಕೇಳಲು ಅಲ್ಲಿಗೆ ಹೋಗುವಳು. ಮುಂದೆ ಮೊಬೈಲ್ ಲಿಂಕ್ ನಿಂದ ಮನೆಯಲ್ಲಿ ಪ್ರವಚನ ಕೇಳುವ ಅಭ್ಯಾಸ ಮಾಡಿಕೊಂಡಳು. ಭಾಗವತ, ರಾಮಾಯಣ ಮಹಾಭಾರತ ಇತ್ಯಾದಿ ಪ್ರವಚನ ಆಕೆಗೆ ತುಂಬಾ ಪ್ರಭಾವ ಬೀರಿತು. ಒಂದು ದಿವಸ ರಾತ್ರಿ ಪತಿ ಹತ್ತು ಗಂಟೆಗೆ ಮನೆಗೆ ಬಂದರು. ಇದು ಹಾಗೆ ಕೆಲವು ದಿವಸ ಮುಂದುವರೆಯಿತು. ಪತ್ನಿಗೆ ಪತಿ ಮಹಾಶಯ ಎಲ್ಲಿ ಕಾಲಹರಣ ಮಾಡುವರು ಎನ್ನುವುದು ಗೊತ್ತಾಯಿತು.
ಆಗ ಶ್ಯಾಮಲಾ ಸಿಟ್ಟಿನಿಂದ," ಶ್ಯಾಮ್ ಅವರೇ, ಈಗ ಸಮಯ ಎಷ್ಟು? ಇದು ಮನೆಗೆ ಬರುವ ಸಮಯವೇ? ನೀವು ಎಲ್ಲಿಗೆ ಹೋಗುವಿರಿ? ಏನೇನು ಮಾಡುವಿರಿ? ನಿಮ್ಮ ಸ್ನೇಹಿತರು ಯಾರು ಎಲ್ಲವೂ ಗೊತ್ತು."
ಶ್ಯಾಮ್ ಅವರಿಗೆ ಸಿಟ್ಟು ಬಂದು, "ಸಮಯ ಕಳೆಯಲು ನಾನು ಗೆಳೆಯರ ಜೊತೆಗೆ ಇಸ್ಪೀಟ್ ಅಲ್ಲದೇ ಆಗಾಗ ಡ್ರಿಂಕ್ಸ್ ತೆಗೆದು ಕೊಳ್ಳಲು ಸ್ನೇಹಿತರು ಒತ್ತಾಯ ಮಾಡುವರು. ಇದು ಬಿಟ್ಟು ಬೇರೇನೂ ಇಲ್ಲ."
"ನೋಡಿ ಇವೆಲ್ಲ ದುರಭ್ಯಾಸ ಇಂದೆ ಕೊನೆ. ನಾಳೆಯಿಂದ ಬೆಳಗ್ಗೆ ಆರು ಗಂಟೆಗೆ ಎದ್ದು ಸ್ನಾನ ಮಾಡಿ ದೇವರ ಪೂಜೆ ಮಾಡಿ ಆಧ್ಯಾತ್ಮಿಕ ಚಿಂತನೆಯಲ್ಲಿ ಸತ್ಕಾಲಕ್ಷೇಪ ಮಾಡಬೇಕು. ಅಂದರೆ ನಮಗೆ ಮನ ಶಾಂತಿ ಅಲ್ಲದೇ ಮಕ್ಕಳು ಇಲ್ಲದ ಚಿಂತೆಯಿಂದ ಹೊರಬರಬಹುದು.ಅದಕ್ಕೆ ಬೇಕಾಗುವ ಪುಸ್ತಕಗಳು, ಮನೆಯಲ್ಲಿ ಪ್ರವಚನ ಹಾಗೂ ದೇವರ ಹಾಡುಗಳು ಕೇಳಲು ಮೊಬೈಲ್ ನಲ್ಲಿ ಲಿಂಕ್ ಎಲ್ಲವನ್ನೂ ಕೊಡುವೆ."
"ಶ್ಯಾಮಲಾ, ನನಗೆ ಅದು ಯಾವುದೂ ಗೊತ್ತಿಲ್ಲ."
ಶ್ಯಾಮ್ ಅವರಿಗೆ ಇದೆಲ್ಲವನ್ನೂ ಮಾಡಲು ಮನಸ್ಸು ಆಗಲಿಲ್ಲ. ಪತಿ ಪತ್ನಿ ಯರಲ್ಲಿ ಮನಸ್ತಾಪ ಆಗಿ ಕೆಲವು ದಿವಸ ಪರಸ್ಪರ ಮಾತನಾಡುವದನ್ನು ಬಿಟ್ಟರು.ಹದಿನೈದು ದಿವಸ ಹಾಗೆ ಕಳೆಯಿತು. ಈ ಅವಧಿಯಲ್ಲಿ ಬರಿ ಕಣ್ಸನ್ನೇ ಯಲ್ಲಿ ಎಲ್ಲವೂ ನಡೆಯಿತು.
ಶ್ಯಾಮ್ ಅವರಿಗೆ ಜ್ಞಾನೋದಯ ವಾಗಲು ಅವರ ಆರೋಗ್ಯದಲ್ಲಿ ಏರು ಪೇರು ಆಗಿ ಸುಧಾರಿಸಲು ಒಂದು ತಿಂಗಳು ಹಿಡಿಯಿತು. ಈ ಅವಧಿಯಲ್ಲಿ ಶ್ಯಾಮಲಾ ದೇವಸ್ಥಾನದಲ್ಲಿ ಮಾಡಿದ ದೇವರ ಸೇವೆ ಹಾಗೂ ಆಸ್ಪತ್ರೆಯಲ್ಲಿ ಪತಿಯ ಸೇವೆ ಇದರಿಂದ ಅವರ ಆರೋಗ್ಯ ಸುಧಾರಿಸಿತು. ಇದು ಅವರಿಗೆ ಅರಿವು ಆಗಿ ಬದಲಾದ ಮನುಷ್ಯ ಆದರು. ಸತ್ಕಾಲಕ್ಷೇಪದ ಜೊತೆಗೆ ಆಗಾಗ ಹಾಸ್ಯ ಮುಂದುವರೆಸಿದ ಶ್ಯಾಮ್ ಹಾಗೂ ಶ್ಯಾಮಲಾ ಸುತ್ತ ಮುತ್ತಲು ಇರುವ ಕಾಲನಿ ನಿವಾಸಿಗಳು ಇವರ ಬಗ್ಗೆ ಪ್ರಭಾವಿತ ರಾಗಿ ದಂಪತಿ ಅಂದರೆ ಹೀಗಿರಬೇಕು ಪ್ರಶಂಸೆ ಮಾಡಿದರು.