Don't worry, just think in Kannada Short Stories by Vaman Acharya books and stories PDF | ಚಿಂತೆ ಬೇಡ ಚಿಂತನೆ ಇರಲಿ

Featured Books
Categories
Share

ಚಿಂತೆ ಬೇಡ ಚಿಂತನೆ ಇರಲಿ

ಚಿಂತೆ ಬೇಡ ಚಿಂತನೆ ಇರಲಿ

(ಕಿರು ಕಥೆ- ವಾಮನಾಚಾರ್ಯ)

ಅದೇ ವರ್ಷ ನಿವೃತ್ತ ರಾದ ಮಹೇಶ್ ಹಾಗೂ ಅವರ ಪತ್ನಿ ಶ್ಯಾಮಲಾ ಮನೆಯಲ್ಲಿ ಇದ್ದರು. ಪವನಪೂರದಲ್ಲಿ ಸಮಯ ಹನ್ನೆರಡು ಗಂಟೆಗೆ ಮೂವತ್ತು ನಿಮಿಷ. ಮೊಬೈಲ್ ಫೋನ್ ರಿಂಗ್ ಆಗುತ್ತ ಇರುವದನ್ನು ನೋಡಿದ ಶ್ಯಾಮಲಾ, ಕೊರಿಯರ್ ಎಂದು ಗೊತ್ತಾಗಿ ಬಾಗಿಲು ತೆಗೆದು ಕವರ್ ತೆಗೆದುಕೊಂಡಳು. ಬಾಗಿಲು ಹಾಕಿ ಪತಿಯನ್ನು ಕರೆದಳು.

"ಮಹೇಶ್, ಎಲ್ಲಿದ್ದಿರಿ? ನಿಮಗೆ ಕೊರಿಯರ್ ಬಂದಿದೆ."

ಮಹೇಶ್ ಮನೆಯ ಹಿಂದೆ ಇರುವ ಬಾಲ್ಕನಿಯಲ್ಲಿ ಪೇಪರ್ ಓದುತ್ತ ಮೊಬೈಲ್ ನಲ್ಲಿ ಚಲನ ಚಿತ್ರ ಹಾಡನ್ನು ಕೇಳುತ್ತಾ ಇದ್ದರು. ಪತ್ನಿಯ ಕರೆ ಬಂದ ಕೂಡಲೇ ಓಡುತ್ತ ಬಂದು ಕವರ್ ತೆಗೆದು ಕೊಂಡರು. ಉತ್ಸುಕತೆಯಿಂದ ಕವರ್ ನಲ್ಲಿ ಇರುವದನ್ನು ನೋಡಿದ ಮೇಲೆ ಅವರ ಮುಖದಲ್ಲಿ ಕಾಣುವ ಮಂದಹಾಸ ಗಮನಿಸಿದ ಶ್ಯಾಮಲಾ,

"ಏನ್ರೀ, ಸಂತಸದ ವಿಷಯವೇ? ನಿಮ್ಮ ಸಂತಸದಲ್ಲಿ ನಾನು ಭಾಗಿ ಆಗಬಹುದೇ? ಎಂದಳು

ಆಕೆ ಎದುರಿಗೆ ನಿಂತಾಗ ಅದೇ ತಾನೆ ಕೇಳಿದ ಚಲನ ಚಿತ್ರದ ಸಂಗೀತ 'ನೀ ಬಂದು ನಿಂತಾಗ ನಿಂತು ನೀ ನಕ್ಕಾಗ ಸೋತೆ ನಾನಾಗ' ಎಂದು ಪತ್ನಿ ಎದುರಿಗೆ ಡಾನ್ಸ ಮಾಡುತ್ತ ಹಾಡು ಹೇಳಿ,

"ಶ್ಯಾಮಲಾ, ನೀನು ನನ್ನ ಸಹಧರ್ಮಿಣಿ. ಈ ಸಂತೋಷ ನಿನ್ನ ಜೊತೆಗೆ ಹಂಚಿಕೊಳ್ಳದೇ ಮತ್ತೆ ಬೇರೆ ಯಾರ ಜೊತೆಗೆ ಹಂಚಿಕೊಳ್ಳಲಿ?"

ಮಕ್ಕಳು ಇಲ್ಲದ ಚಿಂತೆ ಮರೆಯಲು ಇಬ್ಬರೂ ಹೀಗೆ ಮಾತನಾಡುವರು.

"ಮಹೇಶ್ ಅವರೇ ನಿಮ್ಮ ಚಲನ ಚಿತ್ರದ ಹಾಡುಗಳು ಹಾಗೂ ಪ್ರೀತಿಯ ಮಾತುಗಳನ್ನು ನಾನು ಕಳೆದ ಮೂವತ್ತೈದು ವರ್ಷಗಳಿಂದ ಕೇಳುತ್ತಾ ಬಂದಿದ್ದೇನೆ. ನೀವು ಮಾಡಿದ ಘನಂದಾರಿ ಕೆಲಸ ಯಾವುದು ಮೊದಲು ಹೇಳಿ?"

"ಶ್ಯಾಮಲಾ, ಸ್ವಲ್ಪ ತಾಳ್ಮೆ ಇರಲಿ. ತಾಂತ್ರಿಕ ಸಮಸ್ಯೆ ನಿನಗೆ ಅರ್ಥ ವಾಗುವದಿಲ್ಲ. ಅದಕ್ಕಾಗಿ ಸುಮ್ಮನೆ ಕೇಳು. ನಾನು ಕೆಲಸ ಮಾಡಿದ ಕಂಪನಿಯವರು ನಿವೃತ್ತ ಮೆಕ್ಯಾನಿಕಲ್ ಇಂಜನಿಯರ್ ಆದ ನನಗೆ ಯಾಂತ್ರಿಕ ದೋಷ ಸರಿಪಡಿಸಲು ಒಂದು ದಿವಸ ಕರೆ ಮಾಡಿದರು. ಒಂದು ಗಂಟೆ ಅವಧಿಯಲ್ಲಿ ಎಲ್ಲವೂ ಸರಿಮಾಡಿದೆ. ಆಗ ನನಗೆ ಸಂಭಾವನೆ ಎಷ್ಟು ಕೊಡಬೇಕು ಎಂದಾಗ ನಾನು ನನ್ನ ವೈಯಕ್ತಿಕ ಖರ್ಚು ರೂಪಾಯಿ 1/- ಟೆಕ್ನಿಕಲ್ ನಾಲೇಜ್ ಗೆ ರೂಪಾಯಿ 24999/- ಎಂದು ಹೇಳಿದೆ. ಆಗ ಕಂಪನಿಯ ಅಕೌಂಟ್ಸ ಮ್ಯಾನೇಜರ್ ನೀನು ತುಂಬಾ ಜಾಣ ಕಣೋ ಎಂದು ನನ್ನ ಹೆಗಲಮೇಲೆ ಕೈ ಇಟ್ಟು ನಗುತ್ತ ಹೇಳಿದರು. ಅದೇ ಈಗ ಬಂದಿರುವ 25 ಸಾವಿರ ರೂಪಾಯಿಯ ಚೆಕ್."

"ನಿಜಕ್ಕೂ ಕಂಪನಿಯವರು ನಿಮ್ಮ ಕೆಲಸಕ್ಕೆ ಇಷ್ಟು ಸಂಭಾವನೆ ಕೊಟ್ಟಿರುವದು ಆಶ್ಚರ್ಯ. ಒಂದು ಮಾತು ಸತ್ಯ. ನೀವು ಬಡಾಯಿ ಕೊಚ್ಚಿ ಕೊಳ್ಳುವದರಲ್ಲಿ ನಿಸ್ಸೀಮರು. ನಾನು ಮಾಡಿದ ಕೆಲಸದ ಮುಂದೆ ನಿಮ್ಮದು ಏನೂ ಅಲ್ಲ."

"ಶ್ಯಾಮಲಾ, ನಿನ್ನ ಮಾತು ಹಾಸ್ಯಧ ಧಾಟಿಯಲ್ಲಿ ಮಿತಿಮೀರಿ ಹೋಗುತ್ತ ಇದೆ. ಹಾಸ್ಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ನಿನ್ನಲ್ಲಿ ಇರುವ ಅಹಂ ಅದು ಒಳ್ಳೆಯದು ಅಲ್ಲ. ನೀನು ಮಾಡಿದ ಘನಂದಾರಿ ಕೆಲಸ ವಾದಾದರೂ ಏನು? ಬೇಗ ಹೇಳು."

"ಸ್ವಲ್ಪ ತಡೆಯಿರಿ ಪತಿ ಮಹಾಶಯರೇ. ನಾನು ಪವನಪೂರ ಪ್ರಜ್ಞಾ ಕಾಲೇಜ್ ನಲ್ಲಿ ಲೈಬ್ರರಿಯನ್ ಎಂದು ಕೆಲಸ ಮಾಡುವಾಗ ಒಂದು ಲಕ್ಷಕ್ಕೂ ಮೇಲ್ಪಟ್ಟ ಪುಸ್ತಕಗಳು (ಕನ್ನಡ, ಹಿಂದಿ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಸೇರಿ) ಇರುವ ದೊಡ್ಡ ವಾಚನಾಲಯ. ಕಾಲೇಜಿನ ಬೋಧಕರು ಮತ್ತು ಇತರ ಸಿಬ್ಬಂದಿ ವರ್ಗದವರು ಕಪಾಟಿನಲ್ಲಿ ಇರುವ ಪುಸ್ತಕ ತೆಗೆದುಕೊಂಡು ಓದಿದ ಮೇಲೆ ಟೇಬಲ್ ಮೇಲೆ ಇಡುವರು. ಕೆಲವರಂತೂ ನೆಲದಮೇಲೆ ಇಡುವರು. ಇನ್ನೂ ಕೆಲವರು ವಾಚನಾಲಯದ ಹೊರಗೆ ದೊಡ್ಡ ಮರದ ಕೆಳಗೆ ಇರುವ ಕಟ್ಟೆ ಮೇಲೆ ಕುಳಿತು ಅಲ್ಲಿಯೇ ಪುಸ್ತಕ ಬಿಟ್ಟು ಹೋಗುವರು. ಸಾಯಂಕಾಲ ಎಲ್ಲ ಪುಸ್ತಕಗಳನ್ನು ಹುಡುಕಿ ತಂದು ಆಯಾ ಕಪಾಟುಗಳಲ್ಲಿ ಇಡುವದಕ್ಕೆ ಹೆಚ್ಚಿನ ಸಮಯ ಕೆಲಸ ಮಾಡುವ ಅನಿವಾರ್ಯತೆ ಇದ್ದಿತು. ಇಡೀ ವರ್ಷ ಒಂದೂ ಕಂಪ್ಲೇಂಟ್ ಬರದೇ ವಾಚನಾಲಯದ ಕೆಲಸಗಳು ಸುಗಮವಾಗಿ ನಡೆಯಿತು. ಇದು ಕಾಲೇಜಿನ ಆಡಳಿತ ವರ್ಗಕ್ಕೆ ಮೆಚ್ಚುಗೆ ಆಯಿತು. ಆ ವರ್ಷವೇ ನನಗೆ ನಿವೃತ್ತಿ ಇರುವದರಿಂದ 'ಬೆಸ್ಟ್ ಲೈಬ್ರರಿಯನ್ ಆಫ ದಿ ಕಾಲೇಜ್ 2015 ಎನ್ನುವ ಪ್ರಶಸ್ತಿ ಪತ್ರ, ರೂಪಾಯಿ ಹತ್ತು ಸಾವಿರ ನಗದು ಹಾಗೂ ಹಾರ ತುರಾಯಿಯಿಂದ ಸನ್ಮಾನ ಮಾಡಿದರು."

"ಶ್ಯಾಮಲಾ, ನೀನು ಒಳ್ಳೆಯ ಕೆಲಸ ಮಾಡಿರುವದು ನಿಜವಾಗಿಯೂ ಹೆಮ್ಮೆಯ ಕೆಲಸ. ಪುಸ್ತಕ ಜೋಡಿಸುವ ಕೆಲಸ ಯಾರು ಬೇಕಾದರೂ ಮಾಡಬಹುದು. ಆದರೆ ನಮ್ಮ ತಾಂತ್ರಿಕ ಕೆಲಸ ಹಾಗಿಲ್ಲ."

"ಮಹೇಶ್, ನಾನು ಮಾಡಿದ ಕೆಲಸ ಬರಿ ಪುಸ್ತಕ ಜೋಡಿಸುವುದು ಅಲ್ಲ. ಆ ಪುಸ್ತಕಗಳನ್ನು ಕಪಾಟುಗಳಲ್ಲಿ ವಿಷಯಾಧಾರಿತ ಖಾನೆಯಲ್ಲಿ ಇಡಬೇಕು. ಆದರೆ ನಮ್ಮಿಬ್ಬರಲ್ಲಿ ಸ್ಪರ್ಧೆ ಏಕೆ? ತಮಾಷೆ ಮಾಡುವದರಿಂದ ಮನಸ್ಸಿಗೆ ಮುದ ಕೊಡುವದು."

ಪ್ರತಿ ದಿವಸ ಸಾಯಂಕಾಲ ಶ್ಯಾಮಲಾ ಸಮೀಪದಲ್ಲೇ ಇರುವ ಅಂಜನೇಯ ದೇವಸ್ಥಾನದಲ್ಲಿ ನಡೆಯುವ ಪ್ರವಚನ ಕೇಳಲು ಅಲ್ಲಿಗೆ ಹೋಗುವಳು. ಮುಂದೆ ಮೊಬೈಲ್ ಲಿಂಕ್ ನಿಂದ ಮನೆಯಲ್ಲಿ ಕೇಳಿದಳು. ಒಂದು ಸಲದ ಪ್ರವಚನ ಆಕೆಗೆ ತುಂಬಾ ಪ್ರಭಾವ ಬೀರಿತು. ಅಂದು ರಾತ್ರಿ ಪತಿ ಹತ್ತು ಗಂಟೆಗೆ ಮನೆಗೆ ಬಂದರು. ಪತ್ನಿಗೆ ಪತಿ ಮಹಾಶಯ ಎಲ್ಲಿ ಕಾಲಹರಣ ಮಾಡುವರು ಎನ್ನುವುದು ಗೊತ್ತಾಯಿತು.

ಆಗ ಶ್ಯಾಮಲಾ ಸಿಟ್ಟಿನಿಂದ," ಮಹೇಶ್ ಅವರೇ, ಈಗ ಸಮಯ ಎಷ್ಟು? ಇದು ಮನೆಗೆ ಬರುವ ಸಮಯವೇ? ನೀವು ಎಲ್ಲಿಗೆ ಹೋಗುವಿರಿ? ಏನೇನು ಮಾಡುವಿರಿ? ಎಲ್ಲವೂ ಗೊತ್ತು."

ಮಹೇಶ್ ಗೂ ಸಿಟ್ಟು ಬಂದು, "ನಾನು ಗೆಳೆಯರ ಜೊತೆಗೆ ಇಸ್ಪೀಟ್ ಅಲ್ಲದೇ ಆಗಾಗ ಡ್ರಿಂಕ್ಸ್ ಆಗುತ್ತದೆ.ಇದು ಬಿಟ್ಟು ಬೇರೇನೂ ಇಲ್ಲ."

"ನೋಡಿ ಇವೆಲ್ಲವೂ ಇಂದೆ ಕೊನೆ. ನಾಳೆಯಿಂದ ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ದೇವರ ಪೂಜೆ ಮಾಡಿ ಆಧ್ಯಾತ್ಮಿಕ ಚಿಂತನೆಯಲ್ಲಿ ಸತ್ಕಾಲಕ್ಷೇಪ ಮಾಡಬೇಕು. ಅಂದರೆ ನಮಗೆ ಮಕ್ಕಳು ಇಲ್ಲದ ಚಿಂತೆಯಿಂದ ಹೊರಬರಬಹುದು."

"ಶ್ಯಾಮಲಾ, ನನಗೆ ಅದಾವುದು ಬರುವದಿಲ್ಲ."

"ಅದಕ್ಕೆ ಬೇಕಾಗುವ ಪುಸ್ತಕಗಳು, ಮನೆಯಲ್ಲಿ ಪ್ರವಚನ ಕೇಳಲು ಮೊಬೈಲ್ ನಲ್ಲಿ ಲಿಂಕ್ ಎಲ್ಲವನ್ನೂ ಕೊಡುವೆ."

ಮಹೇಶ್ ನಿಗೆ ಇದೆಲ್ಲವನ್ನೂ ಮಾಡಲು ಮನಸ್ಸು ಆಗಲಿಲ್ಲ. ಪತಿ ಪತ್ನಿ ಯರಲ್ಲಿ ಮನಸ್ತಾಪ ಆಗಿ ಪರಸ್ಪರ ಮಾತನಾಡುವದನ್ನು ಬಿಟ್ಟರು. ಹದಿನೈದು ದಿವಸದ ನಂತರ ಮಹೇಶ್ ಗೆ ಜ್ಞಾನೋದಯ ವಾಗಿ ಪತ್ನಿ ಹೇಳಿದ್ದು ಒಪ್ಪಿದ.

ಮುಂದೆ ಅವರಿಬ್ಬರೂ ಸತ್ಕಾಲಕ್ಷೇಪದಲ್ಲಿ ನಿರತರಾಗಿ 'ಮಕ್ಕಳು ಇಲ್ಲದ ಚಿಂತೆ ಬೇಡ ಆಧ್ಯಾತ್ಮಿಕ ಚಿಂತನೆ ಇರಲಿ' ಎನ್ನುವದು ಅವರ ದಿನ ನಿತ್ಯದ ಕಾರ್ಯಕ್ರಮ ವಾಯಿತು.